ಬೆಂಗಳೂರು: ತುಮಕೂರು ಜಿಲ್ಲೆ ತಿಪಟೂರಿನ ಮಠವೊಂದರ ಸ್ವಾಮೀಜಿಗೆ ಅಶ್ಲೀಲ ವಿಡಿಯೋ, ಫೋಟೋ ಮುಂದಿಟ್ಟು 6 ಕೋಟಿ ರೂಪಾಯಿಗೆ ಬೇಡಿಕೆ ಇಟ್ಟು ಬ್ಲಾಕ್ ಮೇಲ್ ಮಾಡಿದ ಪ್ರಕರಣ ನಡೆದಿದೆ. ಸ್ವಾಮೀಜಿ ನೀಡಿದ ದೂರು ಆಧರಿಸಿ ಸಿಸಿಬಿ ಪೊಲೀಸರು ವಿದ್ಯಾ ಬಿರಾದಾರ ಪಾಟೀಲ್ ಎಂಬ ಮಹಿಳೆಯನ್ನು ಬಂಧಿಸಿದ್ದಾರೆ.
ಗುರುವಾರ ಒಂದನೇ ಎಸಿಎಂಎಂ ಕೋರ್ಟ್ ಮುಂದೆ ಮಹಿಳೆಯನ್ನು ಹಾಜರುಪಡಿಸಿ ಹೆಚ್ಚಿನ ವಿಚಾರಣೆ ನಡೆಸಲು ಕಸ್ಟಡಿಗೆ ಪಡೆದುಕೊಳ್ಳಲಾಗಿದೆ.
ವಿಜಯಪುರ ಜಿಲ್ಲೆ ಬಸವನಬಾಗೇವಾಡಿಯ ವಿದ್ಯಾ ತನ್ನನ್ನು ಕರ್ನಾಟಕ ಮಾಹಿತಿ ಹಕ್ಕು ಆಯೋಗದ ಅಧ್ಯಕ್ಷೆ, ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್. ಪಾಟೀಲರ ಸಹೋದರಿ ಎಂದು ಹೇಳಿಕೊಂಡು ವಂಚಿಸಲು ಯತ್ನಿಸಿದ್ದಾಳೆ ಎನ್ನಲಾಗಿದೆ.
ವಿದ್ಯಾ ಆಗಸ್ಟ್ 31ರಂದು ದೂರವಾಣಿ ಕರೆ ಮಾಡಿ ಡಿ.ಬಿ. ಪಲ್ಲವಿ ಮತ್ತು ಸೂರ್ಯನಾರಾಯಣ ಎಂಬುವರು ನಿಮಗೆ ಸಂಬಂಧಿಸಿದ ವಿಡಿಯೋ ಕೊಟ್ಟಿದ್ದು ದೂರು ಸಲ್ಲಿಸಿದ್ದಾರೆ ಎಂದು ಪದೇ ಪದೇ ಕರೆ ಮಾಡಿ ಕಿರುಕುಳ ನೀಡಿದ್ದಾರೆ. ಇದರಿಂದ ಬೇಸತ್ತ ಸ್ವಾಮೀಜಿ ಕಾನೂನು ಸಲಹೆಗಾರ ವಕೀಲರನ್ನು ಸಂಪರ್ಕಿಸುವಂತೆ ಮಹಿಳೆಗೆ ತಿಳಿಸಿದ್ದಾರೆ.
ಬೆಂಗಳೂರಿನ ಗಾಂಧಿನಗರದಲ್ಲಿ ವಕೀಲರನ್ನು ವಿದ್ಯಾ ಭೇಟಿ ಮಾಡಿದ್ದು, ಅಶ್ಲೀಲ ವಿಡಿಯೋಗಳಿದ್ದು ಅವುಗಳನ್ನು ಬಹಿರಂಗಪಡಿಸದಿರಲು ಆರು ಕೋಟಿ ರೂ. ಕೊಡಬೇಕು. ತಕ್ಷಣಕ್ಕೆ 50 ಲಕ್ಷ ನೀಡಬೇಕು ಎಂದು ಬೇಡಿಕೆ ಇಟ್ಟಿದ್ದಾರೆ. ಹಣ ಕೊಡದಿದ್ದರೆ ಫೋಟೋ, ವಿಡಿಯೋ ಬಹಿರಂಗಪಡಿಸುವುದಾಗಿ ಬೆದರಿಕೆ ಹಾಕಿದ್ದಾರೆ. ನನ್ನ ಭಾವಚಿತ್ರ ಹೋಲುವಂತೆ ನಕಲಿ ವಿಡಿಯೋ, ಫೋಟೋ ಸೃಷ್ಟಿಸಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡುವುದಾಗಿ ಬೆದರಿಕೆ ಹಾಕಿ ಹಣ ದೋಚುವ ಸಂಚುರೂಪಿಸಿದ್ದಾರೆ ಎಂದು ಸ್ವಾಮೀಜಿ ದೂರು ನೀಡಿದ್ದು, ಇದರ ಅನ್ವಯ ವಿದ್ಯಾ ಬಿರಾದಾರ, ಡಿ.ಬಿ. ಪಲ್ಲವಿ, ಸೂರ್ಯನಾರಾಯಣ ವಿರುದ್ಧ ಸಿಸಿಬಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ವಿದ್ಯಾ ಅವರನ್ನು ಬಂಧಿಸಿ ವಿಚಾರಣೆ ನಡೆಸಲಾಗಿದ್ದು, ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ ಎಂದು ಹೇಳಲಾಗಿದೆ.