ಉಡುಪಿ: ಮತಯಂತ್ರದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅದಮಾರು ಮಠದ ಶ್ರೀ ವಿಶ್ವಪ್ರಿಯ ತೀರ್ಥ ಸ್ವಾಮೀಜಿ ಎರಡು ಬಾರಿ ಮತದಾನ ಮಾಡಿದ್ದಾರೆ.
ಉಡುಪಿಯ ನಾರ್ತ್ ಶಾಲೆಯ ಮತಗಟ್ಟೆಗೆ ಬೆಳಗ್ಗೆ ಮೊದಲಿಗರಾಗಿ ಮತದಾನಕ್ಕೆ ಆಗಮಿಸಿದ ಸ್ವಾಮೀಜಿಕೈಗೆ ಶಾಯಿ ಗುರುತು ಹಾಕಿಸಿಕೊಂಡು ಮತಯಂತ್ರದಲ್ಲಿ ಗುಂಡಿ ಒತ್ತಿ ಮತ ಹಾಕಿದ್ದರು. ಆದರೆ ಬೀಪ್ ಸೌಂಡ್ ಕೇಳದ ಕಾರಣ ಶ್ರೀಗಳು ಪ್ರಶ್ನಿಸಿದ್ದಾರೆ. ನಿಮ್ಮ ಮತದಾನವಾಗಿದೆ ಎಂದು ಅಧಿಕಾರಿಗಳು ಹೇಳಿದ್ದರಿಂದ ಶ್ರೀಗಳು ಮತಗಟ್ಟೆಯಿಂದ ಹೊರಬಂದು ಮಠಕ್ಕೆ ತೆರಳಲು ಸಿದ್ದರಾಗಿದ್ದಾರೆ.
ಈ ವೇಳೆ ಮತಗಟ್ಟೆ ಅಧಿಕಾರಿಗಳಿಗೆ ಶ್ರೀಗಳ ಮತ ದಾಖಲಾಗದಿರುವುದು ಗಮನಕ್ಕೆ ಬಂದಿದೆ. ಮತ್ತೆ ಸ್ವಾಮೀಜಿಗೆ ಮಾಹಿತಿ ನೀಡಲಾಗಿದ್ದು, ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದ ಶ್ರೀಗಳು ಅಧಿಕಾರಿಗಳ ಮನವಿಯಂತೆ ಮತ್ತೆ ಮತದಾನ ಕೇಂದ್ರದೊಳಗೆ ತೆರಳಿ ಪುನಃ ಮತದಾನ ಮಾಡಿದ್ದಾರೆ. ಬೀಪ್ ಸೌಂಡ್ ಕೇಳಿದ ನಂತರ ಹೊರಗೆ ಬಂದಿದ್ದಾರೆ.