ತುಮಕೂರು: ತುಮಕೂರು ಜಿಲ್ಲೆಯ ರಾಮೇನಹಳ್ಳಿ ಸಿದ್ದಲಿಂಗೇಶ್ವರ ಮಠ(ಗಟ್ಟಿಯಪ್ಪ ಮಠ)ದ ಶಿವ ಪಂಚಾಕ್ಷರಿ ಸ್ವಾಮೀಜಿ ಯಾರ ಗಮನಕ್ಕೂ ತಾರದೆ ಮಠದ ಆಸ್ತಿಯನ್ನು ಮಾರಾಟ ಮಾಡಿದ್ದಾರೆ ಎಂದು ಭಕ್ತರು ಆರೋಪಿಸಿದ್ದಾರೆ.
ವೀರಶೈವ ಯುವ ವೇದಿಕೆ ಮತ್ತು ಗ್ರಾಮಸ್ಥರು ಶನಿವಾರ ಮಠಕ್ಕೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಸ್ವಾಮೀಜಿಯನ್ನು ಪ್ರಶ್ನಿಸಿದಾಗ ಮಠಕ್ಕೂ ನಿಮಗೂ ಸಂಬಂಧವೇನು ಎಂದು ಕೇಳಿದ್ದಾರೆ. ಇದರಿಂದ ಕೆರಳಿದ ಗ್ರಾಮಸ್ಥರು ಸ್ವಾಮೀಜಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ದಾನವಾಗಿ ನೀಡಿದ ಜಮೀನು ಮಾರಾಟ ಮಾಡಿದ್ದ ಬಗ್ಗೆ ಪ್ರಶ್ನಿಸಿದ್ದಾರೆ. ಗ್ರಾಮಸ್ಥರ ವಿಶ್ವಾಸದೊಂದಿಗೆ ಮಠ ಮುನ್ನಡೆಸುವಲ್ಲಿ ಶಿವ ಪಂಚಾಕ್ಷರಿ ಸ್ವಾಮೀಜಿ ವಿಫಲರಾಗಿದ್ದಾರೆ. ಮಠಕ್ಕೆ ಬರುವ ಭಕ್ತರನ್ನು ನಿಂದಿಸುತ್ತಾರೆ ಎನ್ನುವ ಆರೋಪವಿದೆ. ಅಲ್ಲದೆ, ಮಠಕ್ಕೆ ಆಡಳಿತ ಮಂಡಳಿ ಇಲ್ಲ, ಸ್ವಾಮೀಜಿ ಖರ್ಚು ವೆಚ್ಚದ ಲೆಕ್ಕಪತ್ರ ದಾಖಲಿಸಿಲ್ಲ. ಮಠಕ್ಕೆ ದಾನ ನೀಡಿದ ಆಸ್ತಿಯನ್ನು ಮಾರಾಟ ಮಾಡಿ ಮನಸೋ ಇಚ್ಛೆ ಹಣ ಬಳಸುತ್ತಿದ್ದಾರೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಸ್ವಾಮೀಜಿಯನ್ನು ಪ್ರಶ್ನಿಸಿದಾಗ ಮಾತಿನ ಚಕಮಕಿ ನಡೆದಿದೆ. ಬಳಿಕ ಪೊಲೀಸರು ಮಧ್ಯಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ. ಈ ಬಗ್ಗೆ ಹೆಬ್ಬೂರು ಪೊಲೀಸ್ ಠಾಣೆಗೆ ಗ್ರಾಮಸ್ಥರು ದೂರು ನೀಡಿದ್ದಾರೆ.