
ರಾಮನಗರ: ರಾಮನಗರ ಜಿಲ್ಲೆಯ ಪ್ರತಿಷ್ಠಿತ ಮಠಗಳಲ್ಲಿ ಒಂದಾದ ಕಂಚುಗಲ್ ಬಂಡೆಮಠದ ಶ್ರೀ ಬಸವಲಿಂಗ ಸ್ವಾಮೀಜಿ ಆತ್ಮಹತ್ಯೆ ಹಿಂದೆ ಹನಿಟ್ರ್ಯಾಪ್ ಶಂಕೆ ವ್ಯಕ್ತವಾಗಿದೆ. ಮಹಿಳೆಯಿಂದ ಬ್ಲಾಕ್ ಮೇಲ್ ಬಗ್ಗೆ ಸ್ವಾಮೀಜಿ ಡೆತ್ ನೋಟ್ ನಲ್ಲಿ ಪ್ರಸ್ತಾಪಿಸಿದ್ದು, ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ.
ಸ್ವಾಮೀಜಿಯವರನ್ನು ಪೀಠದಿಂದ ಕೆಳಗಿಳಿಸಲು ಹುನ್ನಾರ ನಡೆದಿತ್ತು ಎನ್ನಲಾಗಿದೆ. ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ಕೆಲವರನ್ನು ಪೊಲೀಸರು ವಿಚಾರಣೆ ನಡೆಸಿದ್ದಾರೆ. ಮಹಿಳೆಯೊಬ್ಬರ ಮೂಲಕ ಹನಿಟ್ರ್ಯಾಪ್ ಮಾಡಿ ತಮ್ಮನ್ನು ಕೆಳಗಿಳಿಸಲು ನಡೆದಿರುವ ಸಂಚಿನ ಬಗ್ಗೆ ಸ್ವಾಮೀಜಿ ಡೆತ್ ನೋಟ್ ನಲ್ಲಿ ಪ್ರಸ್ತಾಪಿಸಿದ್ದಾರೆ ಎನ್ನಲಾಗಿದೆ.
ಅಪರಿಚಿತ ವ್ಯಕ್ತಿಯ ಉಲ್ಲೇಖ, ಮಾನಸಿಕ ಕಿರುಕುಳದ ಪ್ರಸ್ತಾಪ ಮಾಡಲಾಗಿರುವ ಡೆತ್ ನೋಟ್ ಆಧರಿಸಿ ವಿವಿವಿಧ ಆಯಾಮಗಳ ಮೂಲಕ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಸ್ವಾಮೀಜಿ ಫೋನ್ ವಶಕ್ಕೆ ಪಡೆದು ಪರಿಶೀಲನೆ ನಡೆಸಲಾಗಿದೆ. ತನಿಖೆಯ ನಂತರ ಸಾವಿನ ಸತ್ಯಾಂಶ ಹೊರಬೀಳಲಿದೆ.