ಬಾಗಲಕೋಟೆ: ರಾಮಾರೂಢ ಮಠದ ಪರಮರಾಮಾರೂಢ ಸ್ವಾಮೀಜಿ ಅವರಿಗೆ ಬರೋಬ್ಬರಿ 1 ಕೋಟಿ ರೂಪಾಯಿ ವಂಚಿಸಿದ ಆರೋಪದಲ್ಲಿ ಜೆಡಿಎಸ್ ಮುಖಂಡನೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.
ಪ್ರಕಾಶ್ ಮುಧೋಳ (50) ಬಂಧಿತ ಜೆಡಿಎಸ್ ಮುಖಂಡ. ವಂಚನೆ ಪ್ರಕರಣ ಸಂಬಂಧ ಸ್ವಾಮೀಜಿ ದೂರು ನೀಡಿದ ಹಿನ್ನೆಲೆಯಲ್ಲಿ ಪ್ರಕಾಶ್ ಮುಧೋಳ ನನ್ನು ಬಂಧಿಸಲಾಗಿದ್ದು, ಇನ್ನೂ ಮೂವರ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ಬೆಳಗಾವಿ ಉತ್ತರ ವಲಯ ಐಜಿಪಿ ವಿಕಾಸ್ ಕುಮಾರ್ ತಿಳಿಸಿದ್ದಾರೆ.
ಮುಧೋಳ ತಾಲೂಕಿನ ಮಿರ್ಜಿ ಮೂಲದ ಪ್ರಕಾಶ್ ಮುಧೋಳ, 2024ರಲ್ಲಿ ರಾಮದುರ್ಗ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾಗಿ ಚುನಾವಣೆಗೆ ನಿಂತಿದ್ದ. ಈತನ ಮೇಲೆ ಈಗಾಗಲೇ ಮೂರು ಕಳ್ಳತನ, ಮೂರು ಚೀಟಿಂಗ್, ಮೂರು ಸುಲಿಗೆ ಸೇರಿದಂತೆ 12 ಕೇಸ್ ಗಳು ಇವೆ.
ಸೆ.12ರಂದು ರಾಮಾರೂಢ ಮಠಕ್ಕೆ ಭೇಟಿ ನೀಡಿ, ಪರಮರಾಮಾರೂಢ ಸ್ವಾಮೀಜಿಯನ್ನು ಪರಿಚಯಿಸಿಕೊಂಡಿದ್ದ. ಸ್ವಾಮೀಜಿ ಅನಾರೋಗ್ಯದ ಬಗ್ಗೆ ವಿಚಾರಿಸಿ ಮಠದಲ್ಲಿ ಎರಡು ಗಂಟೆಗೂ ಹೆಚ್ಚು ಕಾಲ ತಂಗಿದ್ದ ಅಲ್ಲಿಂದ ತೆರಳಿದ್ದ ಆರೋಪಿ ಮಾರನೇ ದಿನವೇ ವಂಚನೆಗೆ ಸ್ಕೆಚ್ ಹಾಕಿದ್ದಾನೆ. ಬಳಿಕ ಎಡಿಜಿಪಿ ಹಾಗೂ ಡಿಎಸ್ ಪಿ ಹೆಸರಲ್ಲಿ ಕರೆ ಮಾಡಿ ಒಂದು ಕೋಟಿ ರೂಪಾಯಿ ಬೆಡಿಕೆ ಇಟ್ಟಿದ್ದಾನೆ. ಅಲ್ಲದೇ ಜೀವ ಬೆದರಿಕೆ ಹಾಕಿದ್ದಾನೆ. ಸ್ವಾಮೀಜಿ ಮಠದ ಮರ್ಯಾದೆ ಪ್ರಶ್ನೆ ಹಾಗೂ ಜೀವಭಯದಿಂದ ಸೆ.15ರಂದು 61 ಲಕ್ಷ ರೂಪಾಯಿ ವ್ಯವಸ್ಥೆ ಮಾಡುತ್ತಾರೆ. ಈ ಹಣವನ್ನು ಪಡೆದ ಆರೋಪಿ ಬಳಿಕ ಖಾಲಿ ಪೇಪರ್, ಎರಡು ಖಾಲಿ ಚೆಕ್ ಗಳ ಮೇಲೆ ಸ್ವಾಮೀಜಿಯಿಂದ ಸಹಿ ಪಡೆದುಕೊಳ್ಳುತ್ತಾನೆ.
ನಂತರ ಮತ್ತೆ ಹಣಕ್ಕಾಗಿ ಬೇಡಿಕೆ ಇಡುತ್ತಾನೆ. ಸೆ.20ರಂದು ಹುಬ್ಬಳ್ಳಿಯಲ್ಲಿ 30 ಲಕ್ಷ ಹಣವನ್ನು ಸ್ವಾಮೀಜಿ ನೀಡುತ್ತಾರೆ. ಹೀಗೆ ಒಂದು ಕೋಟಿ ಹಣ ಪಡೆದ ಬಳಿಕವೂ ಆರೋಪಿ ಮತ್ತೆ ಮತ್ತೆ ಹಣಕ್ಕಾಗಿ ಬೇಡಿಕೆ ಇಡುವುದು, ಬೆದರಿಸುವುದು ಮುಂದುವರೆಸುತ್ತಾನೆ. ಈ ವೇಳೆ ಸ್ವಾಮೀಜಿ ಭಕ್ತರು ಆತನ ವಾಹನದ ನಂಬರ್ ಪರಿಶೀಲನೆ ನಡೆಸುತ್ತಾರೆ. ಈ ವೇಳೆ ಆತ ಜೆಡಿಎಸ್ ಮುಖಂಡ ಪ್ರಕಾಶ್ ಮುಧೋಳ ಎಂಬುದು ಗೊತ್ತಾಗುತ್ತದೆ. ಈ ಹಿನ್ನೆಲೆಯಲ್ಲಿ ಸ್ವಾಮೀಜಿ ಸೆ.27ರಂದು ಸಿಇಎನ್ ಠಾಣೆಯಲ್ಲಿ ವಂಚನೆ ಪ್ರಕರಣ ದಾಖಲಿಸಿದ್ದರು.
ಬಾಗಲಕೋಟೆ ಎಸ್ ಪಿ ಅಮರನಾಥ ರೆಡ್ಡಿ ನೇತೃತ್ವದಲ್ಲಿ ಆರೋಪಿಗಳ ಬಂಧನಕ್ಕೆ ಮೂರು ತಂಡ ರಚನೆ ಮಾಡಿ ಒಂದೇ ದಿನದಲ್ಲಿ ಪ್ರಕಾಶ್ ಮುಧೋಳನನ್ನು ಬಂಧಿಸಲಾಗಿದ್ದು, ಇನ್ನೂ ಮೂವರು ಆರೋಪಿಗಳಿಗಾಗಿ ಹುಡುಕಾಟ ನಡೆಸಲಾಗಿದೆ.