ಶಿವಮೊಗ್ಗ: ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಕವಲೆದುರ್ಗ ಭುವನಗಿರಿ ಸಂಸ್ಥಾನದ ಮಹಾಮತ್ತಿನ ಮಠದ ಪೀಠಾಧಿಪತಿ ಡಾ. ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ(62) ಲಿಂಗೈಕ್ಯರಾಗಿದ್ದಾರೆ.
ಶೀತ ಜ್ವರದಿಂದ ಅಸ್ವಸ್ಥಗೊಂಡ ಸ್ವಾಮೀಜಿಗಳನ್ನು ತೀರ್ಥಹಳ್ಳಿಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಕೋವಿಡ್ ದೃಢಪಟ್ಟಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ. ಕೋವಿಡ್ ನಿಯಮಾನುಸಾರ ಕವಲೆದುರ್ಗ ಮಠದ ಆವರಣದಲ್ಲಿ ಅಂತ್ಯಸಂಸ್ಕಾರ ನಡೆದಿದೆ.
ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ರಡ್ಡೇರಹಟ್ಟಿ ಗ್ರಾಮದ ಸ್ವಾಮೀಜಿ 1959 ರ ಜೂನ್ 1 ರಂದು ಜನಿಸಿದ್ದು, 1996 ರಲ್ಲಿ ಕವಲೆದುರ್ಗ ಸಂಸ್ಥಾನದ ಪೀಠಾಧಿಪತಿಗಳಾಗಿದ್ದರು. ಕುವೆಂಪು ವಿವಿ, ಮದ್ರಾಸ್ ವಿವಿ, ಕೊಲಂಬೊ ಆರೋಗ್ಯ ವಿವಿಗಳಲ್ಲಿ ಪಿ.ಹೆಚ್.ಡಿ. ಪದವಿ ಪಡೆದಿದ್ದ ಅವರು, ಕನ್ನಡ, ಸಂಸ್ಕೃತದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದರು. ಕಲೆ, ಸಾಹಿತ್ಯ, ಸಂಸ್ಕೃತಿ, ಸಾಮಾಜಿಕ ಬೆಳವಣಿಗೆಗಳ ಬಗ್ಗೆ ವಿಶೇಷ ಉಪನ್ಯಾಸದ ಮೂಲಕ ಅಪಾರ ಭಕ್ತರನ್ನು ಹೊಂದಿದ್ದರು. ಮಠದಲ್ಲಿ ಸಹಾಯಕರನ್ನು ನೇಮಿಸಿಕೊಳ್ಳದ ಶ್ರೀಗಳು ಮಠಕ್ಕೆ ಬರುತ್ತಿದ್ದವರಿಗೆ ತಾವೇ ಊಟೋಪಚಾರದ ಸೇವೆ ನೀಡುತ್ತಿದ್ದರು.
ಶ್ರೀಗಳ ನಿಧನಕ್ಕೆ ಸಿಎಂ ಬಿ.ಎಸ್. ಯಡಿಯೂರಪ್ಪ ಸಂತಾಪ:
ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕಿನ ಕವಲೇದುರ್ಗದ ಭುವನಗಿರಿ ಸಂಸ್ಥಾನ ಮಹಾಮಹತ್ತಿನ ಮಠದ ಡಾ. ಶ್ರೀ ಸಿದ್ಧಲಿಂಗ ಶಿವಾಚಾರ್ಯ ಮಹಾಸ್ವಾಮಿಗಳವರ ನಿಧನಕ್ಕೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಅಧ್ಯಯನಶೀಲರು, ಸ್ನೇಹ ಜೀವಿಗಳಾಗಿದ್ದ ಶ್ರೀಗಳು, ಮಠದಲ್ಲಿ ಯಾವ ಸೇವಕರನ್ನೂ ಇಟ್ಟುಕೊಳ್ಳದೆ, ಮಠಕ್ಕೆ ಬಂದ ಭಕ್ತರಿಗೆ ಕೈಯ್ಯಾರೆ ದಾಸೋಹವನ್ನು ಮಾಡಿ ಬಡಿಸುತ್ತಿದ್ದರು. ಮಠದ ಅಭಿವೃದ್ಧಿ ಮತ್ತು ಕೆಳದಿ ಸಂಸ್ಥಾನದ ಇತಿಹಾಸದ ಬಗ್ಗೆ ಅಪಾರ ಕಾಳಜಿಹೊಂದಿ ಕ್ರಿಯಾಶೀಲರಾಗಿದ್ದರು ಎಂದು ಮುಖ್ಯಮಂತ್ರಿಗಳು ಸ್ಮರಿಸಿದ್ದಾರೆ.
ಭಗವಂತನು ಶ್ರೀಗಳಿಗೆ ಸದ್ಗತಿಯನ್ನು ಕರುಣಿಸಲಿ ಹಾಗೂ ಶಿಷ್ಯವೃಂದಕ್ಕೆ ಈ ನೋವನ್ನು ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುವುದಾಗಿ ಸಿಎಂ ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.