ದಾವಣಗೆರೆ: ಲೋಕಸಭೆ ಟಿಕೆಟ್ ಹಂಚಿಕೆಯಲ್ಲಿ ಸಮುದಾಯಕ್ಕೆ ಅನ್ಯಾಯವಾಗಿದೆ. ಬಿಜೆಪಿ ಮತ್ತು ಕಾಂಗ್ರೆಸ್ ಎರಡೂ ಪಕ್ಷಗಳು ನಮ್ಮ ಸಮುದಾಯ ನಿರ್ಲಕ್ಷಿಸಿವೆ ಎಂದು ಹರಿಹರ ತಾಲೂಕಿನ ಹನಗವಾಡಿ ಬಳಿ ವೀರಶೈವ ಲಿಂಗಾಯಿತ ಪಂಚಮಸಾಲಿ ಪೀಠಾಧ್ಯಕ್ಷ ವಚನಾನಂದ ಶ್ರೀಗಳು ಹೇಳಿದ್ದಾರೆ.
ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಎರಡು, ಬಿಜೆಪಿ ಒಂದು ಟಿಕೆಟ್ ನೀಡಿದೆ. ಆದರೆ, ಸಮುದಾಯದ ಜನಸಂಖ್ಯೆಗೆ ಅನುಗುಣವಾಗಿ ಟಿಕೆಟ್ ನೀಡಿಲ್ಲ. ಅನ್ಯಾಯ ಸರಿಪಡಿಸದಿದ್ದರೆ ಸಮಾಜದಿಂದ ಒಗ್ಗಟಿನ ಹೋರಾಟ ನಡೆಸಲು ತೀರ್ಮಾನಿಸಲಾಗಿದೆ ಎಂದು ಹೇಳಿದ್ದಾರೆ.
ಪಂಚಮಸಾಲಿ ಸಮುದಾಯ ಹೆಚ್ಚಾಗಿರುವ ಕ್ಷೇತ್ರಗಳಲ್ಲಿಯೇ ಟಿಕೆಟ್ ನೀಡಿಲ್ಲ. ಕಡಿಮೆ ಜನಸಂಖ್ಯೆ ಇರುವ ಸಮುದಾಯಕ್ಕೆ ನಾಲ್ಕಕ್ಕೂ ಅಧಿಕ ಟಿಕೆಟ್ ನೀಡಲಾಗಿದೆ. ಬಹು ಸಂಖ್ಯಾತ ಪಂಚಮಸಾಲಿ ಸಮುದಾಯಕ್ಕೆ ಟಿಕೆಟ್ ತಪ್ಪಿಸಲಾಗಿದೆ. ಪಂಚಮಸಾಲಿ ಸಮುದಾಯಕ್ಕೆ ಬಿಜೆಪಿ ಮೂರು ಸೀಟು ನೀಡಬೇಕೆಂದು ಶ್ರೀಗಳು ಆಗ್ರಹಿಸಿದ್ದಾರೆ.
ಅಭ್ಯರ್ಥಿಗಳಿಗೆ ಬಿ ಫಾರಂ ಕೊಡಲು ಇನ್ನು ಸಮಯಾವಕಾಶವಿದೆ. ಸಮುದಾಯಕ್ಕೆ ಟಿಕೆಟ್ ಕೊಡದಿದ್ದರೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಸ್ವಾಮೀಜಿ ಎಚ್ಚರಿಕೆ ನೀಡಿದ್ದಾರೆ.