ಜನವರಿ 22ರ ಸೋಮವಾರದಂದು ಅಯೋಧ್ಯೆಯ ಶ್ರೀರಾಮ ಮಂದಿರದಲ್ಲಿ ‘ರಾಮಲಲ್ಲಾ’ ಪ್ರಾಣ ಪ್ರತಿಷ್ಠಾಪನೆ ನೆರವೇರಿದೆ. ಈ ಐತಿಹಾಸಿಕ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಮುಖ್ಯ ಯಜಮಾನನ ಸ್ಥಾನದಲ್ಲಿ ನಿಂತು ವೈದಿಕ ಸಂಪ್ರದಾಯಕ್ಕೆ ಅನುಗುಣವಾಗಿ ಈ ಕಾರ್ಯ ನೆರವೇರಿಸಿದ್ದು, ಈ ಸಂದರ್ಭದಲ್ಲಿ ಗರ್ಭಗುಡಿಯೊಳಗೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ರಾಜ್ಯಪಾಲರಾದ ಆನಂದಿ ಬೆನ್ ಪಟೇಲ್, ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘ ಚಾಲಕ ಮೋಹನ್ ಭಾಗವತ್ ಸೇರಿದಂತೆ ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ನವರು ಹಾಜರಿದ್ದರು.
ರಾಮಲಲ್ಲಾನಿಗೆ ನೈವೇದ್ಯ ಮಾಡುವ ಸಂದರ್ಭದಲ್ಲಿ ಗರ್ಭಗುಡಿಯಲ್ಲಿ ಉಪಸ್ಥಿತರಿದ್ದ ಉಡುಪಿ ಪೇಜಾವರ ಮಠದ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿಯವರು ತಮ್ಮ ಮುಖವನ್ನು ವಸ್ತ್ರದಿಂದ ಮುಚ್ಚಿಕೊಂಡಿದ್ದು, ಈ ಫೋಟೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಅವರ ಈ ನಡೆಯನ್ನು ವಿವಿಧ ರೀತಿಯಲ್ಲಿ ವಿಶ್ಲೇಷಿಸಲಾಗುತ್ತಿದ್ದು, ಸಂಪ್ರದಾಯಕ್ಕೆ ಅನುಗುಣವಾಗಿ ತಮ್ಮ ಪದ್ಧತಿಯನ್ನು ಆಚರಿಸಿದ ಸ್ವಾಮೀಜಿಯವರ ಕಾರ್ಯಕ್ಕೆ ವ್ಯಾಪಕ ಪ್ರಶಂಸೆ ವ್ಯಕ್ತವಾಗುತ್ತಿದೆ.
ಮೂಲಗಳ ಪ್ರಕಾರ ನೈವೇದ್ಯ ಮಾಡುವ ಸಂದರ್ಭದಲ್ಲಿ ದೇವರನ್ನು ನೋಡಬಾರದು ಎಂಬ ಶಾಸ್ತ್ರೀಯ ನಿಯಮವಿದೆ ಎನ್ನಲಾಗಿದ್ದು, ಹೀಗಾಗಿ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿಯವರು ವಸ್ತ್ರದಿಂದ ತಮ್ಮ ಮುಖವನ್ನು ಮುಚ್ಚಿಕೊಂಡಿದ್ದರು ಎಂದು ಹೇಳಲಾಗಿದೆ. ಇನ್ನು ಇದು ದಕ್ಷಿಣ ಭಾರತದ ಸಂಪ್ರದಾಯವೇ ಎಂಬ ಮಾಧ್ಯಮದ ಪ್ರಶ್ನೆಗೆ ಉತ್ತರಿಸಿರುವ ಪೇಜಾವರ ಶ್ರೀಗಳು, ಈ ನಿಯಮವನ್ನು ಎಲ್ಲೆಡೆಯೂ ಆಚರಿಸಲಾಗುತ್ತದೆ. ಅದೇ ರೀತಿ ನಾನು ನಡೆದುಕೊಂಡಿದ್ದೇನೆ ಎಂದು ಹೇಳಿದ್ದಾರೆ. ಪೇಜಾವರ ಶ್ರೀಗಳ ಈ ನಡೆಯನ್ನು ಎಲ್ಲರೂ ಮೆಚ್ಚಿಕೊಂಡಿದ್ದು, ಸಂಪ್ರದಾಯವನ್ನು ಪಾಲಿಸಿರುವ ಶ್ರೀಗಳನ್ನು ಕೊಂಡಾಡಿದ್ದಾರೆ.