ನವದೆಹಲಿ: ಮಧ್ಯಪ್ರದೇಶದ ಇಂದೋರ್ ಮತ್ತೊಮ್ಮ ಭಾರತದ ಸ್ವಚ್ಛ ನಗರ ಎಂಬ ಪ್ರಶಸ್ತಿಯನ್ನು ಪಡೆದುಕೊಂಡಿದೆ. ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರು ಶನಿವಾರ ಸ್ವಚ್ಛ ಸರ್ವೇಕ್ಷಣ್ 2021 ಪ್ರಶಸ್ತಿಗಳನ್ನು ಘೋಷಿಸಿದ್ದು, ಇಂದೋರ್ ಸತತ ಐದನೇ ಬಾರಿ ಪ್ರಶಸ್ತಿಯನ್ನು ಗೆದ್ದಿದೆ.
ಕಳೆದ ವರ್ಷ ಸ್ವಚ್ಛ ನಗರಗಳ ಪಟ್ಟಿಯಲ್ಲಿ ಎರಡನೇ ಸ್ಥಾನ ಪಡೆದಿದ್ದ ಗುಜರಾತ್‌ನ ಸೂರತ್ ಈ ವರ್ಷವೂ ತನ್ನ ಸ್ಥಾನವನ್ನು ಉಳಿಸಿಕೊಂಡಿದೆ. ಆಂಧ್ರಪ್ರದೇಶದ ವಿಜಯವಾಡವು ಪಟ್ಟಿಯಲ್ಲಿ ಮೂರನೇ ಸ್ಥಾನವನ್ನು ಪಡೆದುಕೊಂಡಿದೆ. 2020 ರಲ್ಲಿ, ಮಹಾರಾಷ್ಟ್ರದ ನವಿ ಮುಂಬೈ ಭಾರತದ ಮೂರನೇ ಸ್ವಚ್ಛ ನಗರ ಎಂದು ಘೋಷಿಸಲಾಗಿತ್ತು.
ವಾರ್ಷಿಕ ಸ್ವಚ್ಛತಾ ಸಮೀಕ್ಷೆಯಲ್ಲಿ ಛತ್ತೀಸ್‌ಗಢವು ಸ್ವಚ್ಛ ರಾಜ್ಯ ಪ್ರಶಸ್ತಿಯನ್ನು ಪಡೆದಿದೆ ಮತ್ತು ಉತ್ತರ ಪ್ರದೇಶದ ವಾರಣಾಸಿಯು ಸ್ವಚ್ಛ ಸರ್ವೇಕ್ಷಣ್ 2021 ಪ್ರಶಸ್ತಿಗಳಲ್ಲಿ ಸ್ವಚ್ಛ ಗಂಗಾ ಪ್ರಶಸ್ತಿ ಗೆದ್ದಿದೆ.
ಟ್ವಿಟ್ಟರ್‌ನಲ್ಲಿ ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವ ಹರ್ದೀಪ್ ಸಿಂಗ್ ಪುರಿ ಇಂದೋರ್ ಜನ, ರಾಜಕೀಯ ನಾಯಕರು ಹಾಗೂ ಮುನ್ಸಿಪಲ್ ಕಾರ್ಪೊರೇಷನ್ ಅನ್ನು ಅಭಿನಂದಿಸಿದ್ದಾರೆ.
ಈ ವರ್ಷದ ವಾರ್ಷಿಕ ಸ್ವಚ್ಛತಾ ಸಮೀಕ್ಷೆಯಲ್ಲಿ 342 ನಗರಗಳಿಗೆ ಕೆಲವು ಸ್ಟಾರ್ ರೇಟಿಂಗ್ ನೀಡಲಾಗಿದ್ದು, ಒಟ್ಟು 4,320 ನಗರಗಳು ಇದರಲ್ಲಿ ಭಾಗವಹಿಸಿವೆ. 2016 ರಲ್ಲಿ ಒಟ್ಟು 73 ನಗರಗಳನ್ನು ಒಳಗೊಂಡಿರುವ ಮೊದಲ ಸಮೀಕ್ಷೆಯನ್ನು ಪ್ರಾರಂಭಿಸಲಾಗಿತ್ತು. ಇದು 2020 ರ ವೇಳೆಗೆ 4,242 ನಗರಗಳಿಗೆ ವಿಸ್ತರಿಸಿತ್ತು.