ಬೆಂಗಳೂರು: ಗ್ರಾಮಗಳ ಜನವಸತಿ ಪ್ರದೇಶಗಳ ಆಸ್ತಿಗಳನ್ನು ಅಳತೆ ಮಾಡಿ ಹಕ್ಕು ದಾಖಲೆ ವಿತರಿಸಲು ಕೇಂದ್ರ ಸರ್ಕಾರ ಸ್ವಾಮಿತ್ವ ಯೋಜನೆ ಜಾರಿಗೊಳಿಸಿದೆ. ಗ್ರಾಮ ಠಾಣಾಗಳ ಸರ್ವೆ ಕಾರ್ಯ ನಡೆಸಿ ಪಿಆರ್ ಕಾರ್ಡ್ ವಿತರಣೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಕಂದಾಯ ಸಚಿವ ಆರ್. ಅಶೋಕ್ ಹೇಳಿದ್ದಾರೆ.
ವಿಧಾನ ಪರಿಷತ್ ನಲ್ಲಿ ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿ ಸದಸ್ಯ ವೈ.ಎಂ. ಸತೀಶ್ ಪರವಾಗಿ ಡಿ.ಎಸ್. ಅರುಣ್ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಗ್ರಾಮ ಠಾಣಾ ಗುರುತಿಸುವುದು ಬಹಳ ವಿಶಿಷ್ಟವಾಗಿದೆ. ಬ್ರಿಟೀಷರ ಕಾಲದಲ್ಲಿ ಹಳೆ ಮೈಸೂರು, ಮುಂಬೈ ಪ್ರಾಂತ್ಯ, ಮದರಾಸ್ ಪ್ರಾಂತ್ಯ, ಹೈದರಾಬಾದ್ ಪ್ರಾಂತ್ಯ, ಕೊಡಗು ಪ್ರಾಂತ್ಯದಲ್ಲಿ ಸರ್ವೆ ನಡೆದು ಶತಮಾನದ ಹಿಂದೆ ಮತ್ತೆ ರೀ ಸರ್ವೇ ಮಾಡಲಾಗಿದೆ. ಶತಮಾನದ ನಂತರ ಗ್ರಾಮ ಠಾಣಾ ಸರ್ವೆ ಕಾರ್ಯ ಕೈಗೊಳ್ಳಲಾಗಿದೆ ಎಂದರು.
ಕೇಂದ್ರ ಸರ್ಕಾರದ ಸ್ವಾಮಿತ್ವ ಯೋಜನೆಯಡಿ ಸರ್ವೆ ಕಾರ್ಯ ನಡೆಯುತ್ತಿದೆ. ಡ್ರೋನ್ ಮೂಲಕ ಸರ್ವೆ ಕಾರ್ಯ ನಿಖರವಾಗಿ ದಾಖಲಾಗುತ್ತಿದೆ. ಆದಷ್ಟು ಶೀಘ್ರದಲ್ಲಿ ಎಲ್ಲಾ ಕಡೆ ಡ್ರೋನ್ ಸರ್ವೆ ಕಾರ್ಯ ಪೂರ್ಣಗೊಳ್ಳಲಿದೆ. 10 ಮನೆಗಳಿದ್ದರೂ ಗ್ರಾಮಾ ಠಾಣಾ ಮಾಡಲು ಆದೇಶಿಸಲಾಗಿದ್ದು, 3191 ಗ್ರಾಮಗಳಲ್ಲಿ ಸರ್ವೆ ಕಾರ್ಯ ನಡೆಸಿ 2467 ಗ್ರಾಮಗಳ 8 ಲಕ್ಷ ಕರಡು ಪಿಆರ್ ಕಾರ್ಡ್ ವಿತರಿಸಲಾಗಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.