ಕಾಂತಿ: ಪಶ್ಚಿಮಬಂಗಾಳದ ಪೂರ್ಬಾ ಮೇದಿನಿಪುರ ಜಿಲ್ಲೆಯ ಕಾಂತಿ ಪುರಸಭೆ ಕಚೇರಿಯಿಂದ ಪರಿಹಾರ ಸಾಮಗ್ರಿ ಕದ್ದ ಆರೋಪದ ಮೇಲೆ ಬಿಜೆಪಿ ನಾಯಕ ಸುವೆಂದು ಅಧಿಕಾರಿ ಮತ್ತು ಅವರ ಸಹೋದರ ಸೌಮೆಂದು ಅಧಿಕಾರಿ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.
ಕಾಂತಿ ಪುರಸಭೆ ಆಡಳಿತ ಮಂಡಳಿ ಸದಸ್ಯ ರತ್ನದಿಪ್ ಮನ್ನಾ ಅವರ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೇ 29 ರಂದು ಮಧ್ಯಾಹ್ನ 12.30 ಕ್ಕೆ ಸುವೆಂದು ಅಧಿಕಾರಿ ಮತ್ತು ಅವರ ಸಹೋದರ, ಮಾಜಿ ಮುನ್ಸಿಪಾಲ್ ಮುಖ್ಯಸ್ಥ ಸೌಮೆಂದು ಅಧಿಕಾರಿ ನಿರ್ದೇಶನದ ಮೇರೆಗೆ ಸರ್ಕಾರದ ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳನ್ನು ಕಳವು ಮಾಡಲಾಗಿದೆ.
ಬಲವಂತವಾಗಿ ಮತ್ತು ಕಾನೂನುಬಾಹಿರವಾಗಿ ಬೀಗಗಳನ್ನು ತೆರೆಯುವ ಮೂಲಕ ಪುರಸಭೆಯ ಕಚೇರಿ ಗೋದಾಮಿನಿಂದ ಲಕ್ಷಾಂತರ ರೂಪಾಯಿ ಮೌಲ್ಯದ ಪರಿಹಾರ ಸಾಮಗ್ರಿ ತೆಗೆದುಕೊಂಡು ಹೋಗಲಾಗಿದೆ. ಕಳವು ಸಂದರ್ಭದಲ್ಲಿ ಬಿಜೆಪಿ ನಾಯಕರು ಕೇಂದ್ರ ಸಶಸ್ತ್ರ ಪಡೆಗಳನ್ನು ಬಳಸಿಕೊಂಡಿದ್ದಾರೆ ಎಂದು ಕಾಂತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.