
ಬೆಳಗಾವಿ: ಜನಾಕ್ರೋಶಕ್ಕೆ ಮಣಿದ ಅಧಿಕಾರಿಗಳು ಬೆಳಗಾವಿ ಸುವರ್ಣ ವಿಧಾನಸೌಧದಲ್ಲಿ ಶಾವಿಗೆ ಒಣಹಾಕಿದ್ದ ಮಹಿಳೆಗೆ ಮತ್ತೆ ಕೆಲಸ ಕೊಟ್ಟಿದ್ದಾರೆ.
ಇತ್ತೀಚೆಗೆ ಬೆಳಗಾವಿಯ ಸುವರ್ಣ ವಿಧಾನಸೌಧದ ಮೆಟ್ಟಿಲುಗಳ ಮೇಲೆ ಕಾರ್ಮಿಕ ಮಹಿಳೆ ಶಾವಿಗೆ ಒಣಹಾಕಿದ್ದರು. ಸಾಮಾಜಿಕ ಜಾಲತಾಣದಲ್ಲಿ ಫೋಟೋ ವೈರಲ್ ಆಗಿ ಈ ವಿಚಾರ ಭಾರಿ ಚರ್ಚೆಗೆ ಗ್ರಾಸವಾಗಿತ್ತು.
ಸ್ವಚ್ಛತೆ ಕೆಲಸಕ್ಕೆ ಬರುತ್ತಿದ್ದ ಮಹಿಳೆ ಶಾವಿಗೆ ಒಣಗಿ ಹಾಕಿದ್ದರಿಂದ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಗುತ್ತಿಗೆದಾರರ ಮೂಲಕ ಕೆಲಸದಿಂದ ವಜಾ ಮಾಡಿದ್ದರು. ಈ ರೀತಿ ಶಾವಿಗೆ ಒಣ ಹಾಕಬಾರದು ಎಂದು ಮಹಿಳೆಗೆ ಹೇಳಬಹುದಿತ್ತು. ಆದರೆ ಅವರನ್ನು ಕೆಲಸದಿಂದಲೇ ವಜಾ ಮಾಡಿದ್ದು ಸರಿಯಲ್ಲವೆಂದು ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ದಿನಗೂಲಿ ಆಧಾರದಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯನ್ನು ಮತ್ತೆ ಕೆಲಸಕ್ಕೆ ತೆಗೆದುಕೊಳ್ಳಲಾಗಿದೆ.