ಬೆಂಗಳೂರು: ಸುವರ್ಣ ಮಹೋತ್ಸವ ಪ್ರಶಸ್ತಿ ನೀಡುವ ವೇಳೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಧಿಕಾರಿಗಳ ಎಡವಟ್ಟಿನಿಂದಾಗಿ ವ್ಯಕ್ತಿಯೋರ್ವರಿಗೆ ಪ್ರಶಸ್ತಿ ನೀಡುವುದಾಗಿ ಬೆಂಗಳೂರಿಗೆ ಕರೆಸಿ ಪ್ರಶಸ್ತಿ ನೀಡದೇ ಅವಮಾನ ಮಾಡಿ ಕಳುಹಿಸಿರುವ ಘಟನೆ ನಡೆದಿದೆ.
ಮಂಗಳೂರಿನ ಸಮಾಜ ಸೇವಕರೊಬ್ಬರಿಗೆ ಪ್ರಶಸ್ತಿ ನೀಡುವುದಾಗಿ ಘೋಷಿಸಿ ಬೆಂಗಳೂರಿಗೆ ಕರೆಸಲಾಗಿದೆ. ಅವರು ಬೆಂಗಳೂರಿಗೆ ಪ್ರಶಸ್ತಿ ಸ್ವೀಕರಿಸಲು ಆಗಮಿಸಿದ ಮೇಲೆ ಪ್ರಶಸ್ತಿ ನಿಮಗಲ್ಲ, ಸಣ್ಣ ತಪ್ಪಿನಿಂದ ನಿಮ್ಮ ಹೆಸರು ಪ್ರಕಟವಾಗಿದೆ ಎಂದು ಅಧಿಕಾರಿಗಳು ಅವಮಾನಿಸಿದ್ದಾರೆ. ಅವಮಾನಗೊಂಡ ವ್ಯಕ್ತಿ ಬೇಸರಗೊಂಡಿದ್ದಾರೆ.
ಮಂಗಳೂರಿನ ಬಾಬು ಪಿಲಾರ್ ಎಂಬುವವರಿಗೆ ಫೋನ್ ಮಾಡಿದ ಅಧಿಕಾರಿಗಳು ನೀವು ಸುವರ್ಣ ಮಹೋತ್ಸವ ಪ್ರಶಸ್ತಿಗೆ ಆಯ್ಕೆಯಾಗಿದ್ದೀರಿ ಬೆಂಗಳೂರಿಗೆ ಬನ್ನಿ ಎಂದು ಕರೆದಿದ್ದಾರೆ. ಮಂಗಳೂರಿನಿಂದ ಬೆಂಗಳೂರಿಗೆ ಬಂದ ಸಮಾಜ ಸೇವಕ ಬಾಬು ಪಿಲಾರ್ ಇನ್ನೇನು ಪ್ರಶಸ್ತಿ ಸ್ವೀಕಾರ ಸಮಾರಂಭಕ್ಕೆ ಹೋಗಬೇಕು ಎನ್ನುವಷ್ಟರಲ್ಲಿ ಅಧಿಕಾರಿಗಳು ಪ್ರಶಸ್ತಿ ನಿಮಗಲ್ಲ ಎಂದು ಕೈ ಎತ್ತಿದ್ದಾರೆ.
ಕುಮಾರಕೃಪಾ ಅಥಿತಿ ಗೃಹದಲ್ಲಿ ಆತಿಥ್ಯ ನೀಡಿ ಬಾಬು ಪಿಲಾರ್ ಅವರಿಗೆ ಪ್ರಶಸ್ತಿ ನಿಮಗಲ್ಲ. ಸಣ್ಣ ಕಣ್ತಪ್ಪಿನಿಂದ ಹೀಗಾಗಿದೆ. ಕ್ಷಮಿಸಿ. ಪ್ರಶಸ್ತಿ ಘೋಷಣೆಯಾಗಿರುವುದು ಇನ್ನೋರ್ವ ಸಮಾಜ ಸೇವಕ ಬಾಬು ಕಿಲಾರ್ ಎಂಬುವವರಿಗೆ ಎಂದು ತಿಳಿಸಿದ್ದಾರೆ. ಇದರಿಂದ ಬಾಬು ಪಿಲಾರ್ ತೀವ್ರ ಮುಜುಗರಕ್ಕೀಡಾಗಿದ್ದು, ಅವಮಾನಿತರಾಗಿದ್ದಾರೆ.
ಸುವರ್ಣ ಮಹೋತ್ಸವ ಪ್ರಶಸ್ತಿ ಪಟ್ಟಿಯಲ್ಲಿ ಬಾಬು ಕಿಲಾರ್ ಹೆಸರು ಘೋಷಣೆಯಾಗಿತ್ತು. ಅಧಿಕಾರಿಗಳು ಬಾಬು ಕಿಲಾರ್ ಅವರಿಗೆ ಕರೆ ಮಾಡುವುದು ಬಿಟ್ಟು ಬಾಬು ಪಿಲಾರ್ ಎಂಬುವವರಿಗೆ ಕರೆ ಮಾಡಿ ಎಡವಟ್ಟು ಮಾಡಿದ್ದಾರೆ. ದಕ್ಷಿಣ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೂ ಬಾಬು ಪಿಲಾರ್ ಆಯ್ಕೆಯಾಗಿದ್ದರು. ಆದರೆ ಆ ಕಾರ್ಯಕ್ರಮವನ್ನು ಬಿಟ್ಟು ಸುವರ್ಣ ಮಹೋತ್ಸವ ಪ್ರಶಸ್ತಿಗಾಗಿ ಬೆಂಗಳೂರಿಗೆ ಆಗಮಿಸಿದ್ದರು.