ಮಧ್ಯಪ್ರದೇಶದ ಭೋಪಾಲ್ನಲ್ಲಿ ಕಿಯಾ ಸೆಲ್ಟೋಸ್ ಎಸ್.ಯು.ವಿ. ಸ್ಪೀಡ್ ಬ್ರೇಕರ್ನಲ್ಲಿ ಸಿಲುಕಿರುವ ಫೋಟೋ ವೈರಲ್ ಆಗುತ್ತಿದೆ. ವರದಿ ಪ್ರಕಾರ, ಅಭಿಷೇಕ್ ಶರ್ಮಾ ಎಂಬ ವ್ಯಕ್ತಿ ಈ ಫೋಟೋವನ್ನು ಟ್ವಿಟ್ಟರ್ನಲ್ಲಿ ಪೋಸ್ಟ್ ಮಾಡಿದ್ದು, ಈ ಪರಿಸ್ಥಿತಿಯನ್ನು ‘ಮಾಸ್ಟರ್ ಪೀಸ್’ ಎಂದು ಕರೆದಿದ್ದಾರೆ.
ಸ್ಪೀಡ್ ಬಂಪ್ ಎಷ್ಟು ದೊಡ್ಡದಾಗಿದೆ ಎಂದರೆ 190 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಹೊಂದಿರುವ ಸೆಲ್ಟೋಸ್ ಕಾರು ಕೂಡ ಅದರ ಮೇಲೆ ಸಿಲುಕಿಕೊಂಡಿದೆ. ಈ ಸ್ಪೀಡ್ ಬ್ರೇಕರ್ ತಯಾರಿಸಿದ ಅತ್ಯುತ್ತಮ ಇಂಜಿನಿಯರ್ಗೆ ಒಂದು ದೊಡ್ಡ ಸೆಲ್ಯೂಟ್. ಕಾರುಗಳು ಆಗಾಗ್ಗೆ ಇದಕ್ಕೆ ಸಿಲುಕಿಕೊಳ್ಳುತ್ತವೆ. ಆದರೆ, ಆಡಳಿತವು ಮಾತ್ರ ನಿದ್ರಾವಸ್ಥೆಯಲ್ಲಿದೆ ಎಂದು ಅಭಿಷೇಕ್ ತಮ್ಮ ಟ್ವಿಟ್ಟರ್ ಪೋಸ್ಟ್ನಲ್ಲಿ ಟೀಕಿಸಿದ್ದಾರೆ.
ಉತ್ತಮ ರಸ್ತೆಗಳನ್ನು ಒದಗಿಸುವಲ್ಲಿ ಅಸಮರ್ಥವಾಗಿರುವ ಬಿಬಿಎಂಪಿಯ ಪರಮಾಧಿಕಾರಕ್ಕೆ ಭೋಪಾಲ್ ನ ಬಿಎಂಸಿ ಸವಾಲು ಹಾಕಿದೆ ಎಂದೂ ಅವರು ಟೀಕಿಸಿದ್ದಾರೆ.
2019 ರಲ್ಲಿ ಬಿಡುಗಡೆಯಾದ ನಂತರ, ಕಿಯಾದ ಸೆಲ್ಟೋಸ್ ಶೀಘ್ರದಲ್ಲೇ ಭಾರತದಲ್ಲಿ ಹೆಚ್ಚು ಮಾರಾಟವಾದ ಕಾರು ಎಂದು ಸಾಬೀತಾಯಿತು. ದಕ್ಷಿಣ ಕೊರಿಯಾದ ವಾಹನ ತಯಾರಕರು ಸಿವೈ21 ನಲ್ಲಿ 1.5 ಲಕ್ಷ ಮಾರಾಟದ ಗಡಿಯನ್ನು ದಾಟಿದ್ದಾರೆ. ಕಳೆದ ವರ್ಷ ಅಕ್ಟೋಬರ್ನಲ್ಲಿ 10,480 ಯುನಿಟ್ಗಳನ್ನು ಮಾರಾಟ ಮಾಡಲು ಯಶಸ್ವಿಯಾಗಿದ್ದಾರೆ.
ಅಂದಹಾಗೆ, ಕಿಯಾ ಸೆಲ್ಟೋಸ್ ಮಧ್ಯಮ ಗಾತ್ರದ ಎಸ್ ಯು ವಿ ಆಗಿದೆ ಮತ್ತು ಭಾರತದಲ್ಲಿ ಒಟ್ಟು 17 ರೂಪಾಂತರಗಳಲ್ಲಿ ನೀಡಲಾಗುತ್ತದೆ. ಈ ಕಾರು 9.95 ಲಕ್ಷದ ಆರಂಭಿಕ ಬೆಲೆಯಿಂದ, ಉನ್ನತ ಮಾದರಿಗೆ 18.19 ಲಕ್ಷ ರೂ. ವರೆಗೆ ದೊರಕುತ್ತದೆ.