ಯಾದಗಿರಿ: ರಾಜ್ಯದಲ್ಲಿ ತೀವ್ರ ವಿವಾದಕ್ಕೆ ಕಾರಣವಾಗಿದ್ದ ಎಸ್ಐ ಪರಶುರಾಮ್ ಅನುಮಾನಾಸ್ಪದ ಸಾವಿನ ಕಾರಣ ಬಹಿರಂಗವಾಗಿದೆ. ಅವರ ಸಾವು ಆತ್ಮಹತ್ಯೆಯಲ್ಲ, ಹೃದಯಾಘಾತದಿಂದ ಸಂಭವಿಸಿದೆ ಎಂದು ಮರಣೋತ್ತರ ಪರೀಕ್ಷೆ ವರದಿ ತಿಳಿಸಿದೆ.
ಯಾದಗಿರಿ ನಗರ ಠಾಣೆಯ ಕಾನೂನು ವ್ಯವಸ್ಥೆ ಪಿಎಸ್ಐ ಪರಶುರಾಮ್ ಅನುಮಾನಾಸ್ಪದ ಸಾವಿನ ಕುರಿತ ಊಹಾಪೋಹಗಳಿಗೆ ತೆರೆ ಬಿದ್ದಿದೆ. ಅವರ ಮೃತ ದೇಹದ ವಿವಿಧ ಅಂಗಗಳನ್ನು ಎಫ್ಎಸ್ಎಲ್ ಗೆ ಕಳುಹಿಸಲಾಗಿತ್ತು. ಪರೀಕ್ಷೆಯಲ್ಲಿ ಅವರ ದೇಹದಲ್ಲಿ ಯಾವುದೇ ವಿಷಕಾರಿ ಅಂಶ ಕಂಡು ಬಂದಿಲ್ಲ. ಹೃದಯಾಘಾತದಿಂದ ಸಾವು ಸಂಭವಿಸಿದೆ ಎಂದು ಹೇಳಲಾಗಿದೆ.
ಪರಶುರಾಮ್ ಸಾವಿನ ಪ್ರಕರಣ ರಾಜ್ಯದಲ್ಲಿ ಭಾರಿ ವಿವಾದಕ್ಕೆ ಕಾರಣವಾಗಿತ್ತು. ಸಾವಿನ ಬಗ್ಗೆ ಆಡಳಿತ -ವಿಪಕ್ಷಗಳ ನಡುವೆ ಆರೋಪ ಪ್ರತ್ಯಾರೋಪಗಳಿಗೆ ಕಾರಣವಾಗಿತ್ತು. ಆಗಸ್ಟ್ 2ರಂದು ಪರಶೂರಾಮ್ ಮೃತಪಟ್ಟಿದ್ದರು. ಅವಧಿ ಪೂರ್ವ ವರ್ಗಾವಣೆಯಿಂದ ಖಿನ್ನತೆಗೆ ಒಳಗಾಗಿದ್ದರು. ಅವರ ವರ್ಗಾವಣೆ ತಡೆಗೆ ಯಾದಗಿರಿ ಶಾಸಕ ಚೆನ್ನಾರೆಡ್ಡಿ ಪಾಟೀಲ್ ಮತ್ತು ಅವರ ಪುತ್ರ ಸನ್ನೇಗೌಡ ಅವರು 30 ಲಕ್ಷ ರೂ.ಗೆ ಬೇಡಿಕೆ ಇಟ್ಟಿದ್ದರಿಂದ ಅವರು ಮೃತಪಟ್ಟಿದ್ದಾರೆ ಎಂದು ಕುಟುಂಬದವರು ದೂರು ನೀಡಿದ್ದು, ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದರು. ಶಾಸಕ ಮತ್ತು ಅವರ ಪುತ್ರನ ವಿರುದ್ಧ ಪ್ರಕರಣ ದಾಖಲಾಗಿತ್ತು. ಸಿಐಡಿ ತಂಡ ತನಿಖೆ ನಡೆಸಿತ್ತು. ಮರಣೋತ್ತರ ಪರೀಕ್ಷೆ ವರದಿ ಪಡೆದು ಸಿಐಡಿ ತನಿಖೆ ಮುಂದುವರೆಸಿದೆ ಎಂದು ಹೇಳಲಾಗಿದೆ.