
ಬೆಂಗಳೂರು: ಸರ್ಕಾರಿ ನೌಕರರ ವಿರುದ್ಧ ಭ್ರಷ್ಟಾಚಾರ ನಿಗ್ರಹ ಕಾಯ್ದೆಯಡಿ ಮೂರನೇ ವ್ಯಕ್ತಿ ದಾಖಲಿಸಿದ ಪ್ರಕರಣದ ನ್ಯಾಯಾಂಗದಲ್ಲಿ ಇತ್ಯರ್ಥಕ್ಕೆ ಬಾಕಿ ಇದೆ ಎಂಬ ಕಾರಣಕ್ಕೆ ಆ ನಿವೃತ್ತ ನೌಕರರ ಪಿಂಚಣಿಗೆ ತಡೆ ನೀಡುವುದು ಸರಿಯಲ್ಲ ಎಂದು ಹೈಕೋರ್ಟ್ ಆದೇಶ ನೀಡಿದೆ.
ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ(ಕೆಪಿಟಿಸಿಎಲ್) ಈ ಕುರಿತಾಗಿ ಸಲ್ಲಿಸಿದ ಮೇಲ್ಮನವಿಯನ್ನು ಹೈಕೋರ್ಟ್ ನ್ಯಾಯಮೂರ್ತಿ ಸುನಿಲ್ ದತ್ ಯಾದವ್ ಮತ್ತು ನ್ಯಾಯಮೂರ್ತಿ ವಿಜಯಕುಮಾರ್ ಪಾಟೀಲ್ ಅವರಿದ್ದ ಪೀಠ ವಜಾಗೊಳಿಸಿದೆ. ಎಲ್ಲಾ ನಿವೃತ್ತಿ ಭತ್ಯೆಗಳನ್ನು ನೀಡುವಂತೆ ಕೆಪಿಟಿಸಿಎಲ್ ಗೆ ನಿರ್ದೇಶನ ನೀಡಿ ಏಕ ಸದಸ್ಯ ಪೀಠ ಹೊರಡಿಸಿದ್ದ ಆದೇಶವನ್ನು ವಿಭಾಗೀಯಪೀಠ ಎತ್ತಿ ಹಿಡಿದಿದೆ.
ಭ್ರಷ್ಟಾಚಾರ ನಿಗ್ರಹ ಕಾಯ್ದೆಯಡಿ ಮೂರನೇ ವ್ಯಕ್ತಿ ದಾಖಲಿಸಿದ ದೂರಿನ ವಿಚಾರಣೆ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯ ನಿಯಮ 171ಕ್ಕೆ ಒಳಪಡುತ್ತದೆ ಎಂದು ಪರಿಗಣಿಸುವಂತಿಲ್ಲ. ಮೂರನೇ ವ್ಯಕ್ತಿ ಹೂಡಿದ ಪ್ರಕರಣ ಯಾವುದೇ ರೀತಿಯಲ್ಲೂ ನ್ಯಾಯಾಂಗ ಪ್ರಕ್ರಿಯೆ ಬಾಕಿ ಇದೆ ಎಂಬ ವ್ಯಾಪ್ತಿಗೆ ಒಳಪಡುವುದಿಲ್ಲ ಎಂದು ವಿಭಾಗಿಯ ಪೀಠ ಆದೇಶ ನೀಡಿದೆ.
ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ನಿಯಮ 171 ಅನ್ವಯಿಸಬೇಕಾದಲ್ಲಿ ಉದ್ಯೋಗಿಯಿಂದ ಸರ್ಕಾರಕ್ಕೆ ಅಥವಾ ಮಂಡಳಿಗೆ ಭಾರಿ ಪ್ರಮಾಣದ ನಷ್ಟವಾಗಿರಬೇಕು. ಆದರೆ, ಈ ಪ್ರಕರಣದಲ್ಲಿ ಅರ್ಜಿದಾರರಿಂದ ಯಾವುದೇ ನಷ್ಟ ಆಗಿರುವುದಿಲ್ಲ. ಅಲ್ಲದೇ, ದೂರು ನೀಡಿರುವುದು ಮೂರನೇ ವ್ಯಕ್ತಿ ಎಂದು ಹೈಕೋರ್ಟ್ ಹೇಳಿದೆ.
ಪ್ರಕರಣದ ಅರ್ಜಿದಾರರಾಗಿರುವ ಮಲ್ಲಿಕಾರ್ಜುನ ಅವರು 2022ರ ಮೇ 31 ರಂದು ಸೇವೆಯಿಂದ ನಿವೃತ್ತರಾಗಿದ್ದಾರೆ. ಅವರು ಸೇವೆಯಲ್ಲಿದ್ದಾಗ 2018ರ ಏಪ್ರಿಲ್ 9ರಂದು ಮೂರನೇ ವ್ಯಕ್ತಿ ನೀಡಿದ್ದ ದೂರು ಆಧರಿಸಿ ಭ್ರಷ್ಟಾಚಾರ ನಿಗ್ರಹ ಕಾಯ್ದೆಯಡಿ ಎಸಿಬಿ ಪ್ರಕರಣ ದಾಖಲಿಸಿತ್ತು. ಆಗ ಅವರನ್ನು ಅಮಾನತ್ತಿನಲ್ಲಿಟ್ಟು ನಂತರ ಉದ್ಯೋಗಕ್ಕೆ ಸೇರಿಸಿಕೊಳ್ಳಲಾಗಿತ್ತು. ಸೇವಾ ನಿವೃತ್ತಿ ಹೊಂದಿದ ನಂತರ 2022ರ ಆಗಸ್ಟ್ ನಲ್ಲಿ ನ್ಯಾಯಾಲಯ ಕಾಗ್ನಿಜೆನ್ಸ್ ವಿಚಾರಣಾ ಪ್ರಕ್ರಿಯೆ ಆರಂಭಿಸಿತು.
ನಿವೃತ್ತರಾದ ನಂತರ ಮಲ್ಲಿಕಾರ್ಜುನ ಅವರು ಪಿಂಚಣಿ ಕೋರಿದ್ದರೂ ಪ್ರಕರಣ ವಿಚಾರಣೆ ಬಾಕಿ ಇದೆ ಎಂದು ಕೆಪಿಟಿಸಿಎಲ್ ಶೇಕಡ 50ರಷ್ಟು ಮಾತ್ರ ಪಿಂಚಣಿ ನೀಡುವುದಾಗಿ ಆದೇಶಿಸಿತು. ಇದನ್ನು ಮಲ್ಲಿಕಾರ್ಜುನ ಅವರು ಹೈಕೋರ್ಟ್ ಏಕ ಸದಸ್ಯ ಪೀಠದಲ್ಲಿ ಪ್ರಶ್ನಿಸಿದಾಗ ಪಿಂಚಣಿ ನೀಡಲೇಬೇಕು ಎಂದು ಏಕ ಸದಸ್ಯ ಪೀಠ ಆದೇಶಿಸಿದ್ದು, ಈ ಆದೇಶವನ್ನು ಪ್ರಶ್ನಿಸಿ, ಕೆಪಿಟಿಸಿಎಲ್ ವಿಭಾಗೀಯ ಪೀಠದಲ್ಲಿ ಮೇಲ್ಮನವಿ ಸಲ್ಲಿಸಿತು. ಮೇಲ್ಮನವಿಯನ್ನು ವಜಾಗೊಳಿಸಿದ ವಿಭಾಗಿಯ ಪೀಠ ಏಕಸದಸ್ಯ ಪೀಠ ಹೊರಡಿಸಿದ ಆದೇಶವನ್ನು ಎತ್ತಿ ಹಿಡಿದಿದೆ.