ಬೆಂಗಳೂರು: ನಾನಾ ಕಾರಣಗಳಿಂದ ರಾಜ್ಯದ ಯಾವುದೇ ನ್ಯಾಯಾಲಯಗಳಲ್ಲಿ ನಿರ್ದಿಷ್ಟ ಅವಧಿಗೆ ಕೋರ್ಟ್ ಕಲಾಪ ಬಹಿಷ್ಕರಿಸುವ ಅಥವಾ ಮುಷ್ಕರ ನಡೆಸುವ ವಕೀಲರ ನಡೆಯನ್ನು ನ್ಯಾಯದಾನ ಆಡಳಿತದಲ್ಲಿ ಹಸ್ತಕ್ಷೇಪವೆಂದು ಪರಿಗಣಿಸುವ ಜೊತೆಗೆ ಅಂತಹ ವಕೀಲರನ್ನು ಅಮಾನತುಗೊಳಿಸುವ ಬಗ್ಗೆ ಕಾನೂನು ತಿದ್ದುಪಡಿ ಮಾಡಲು ಹೈಕೋರ್ಟ್ ಪ್ರಸ್ತಾಪಿಸಿದೆ.
ಇದಕ್ಕಾಗಿ ಹೈಕೋರ್ಟ್ ಮತ್ತು ಅಧೀನ ನ್ಯಾಯಾಲಯಗಳ ತಿದ್ದುಪಡಿ ನಿಯಮ 2024 ಅನ್ನು ಹೈಕೋರ್ಟ್ ಬಿಡುಗಡೆ ಮಾಡಿದೆ.
ಹೈಕೋರ್ಟ್ ಮತ್ತು ಅಧೀನ ನ್ಯಾಯಾಲಯಗಳಲ್ಲಿ ವಕೀಲರು ಈ ಷರತ್ತಿಗೆ ಒಳಪಟ್ಟು ವೃತ್ತಿ ನಡೆಸಬೇಕು. ಕರಡು ನಿಯಮಗಳ ಪ್ರಕಾರ ಯಾವುದೇ ವಕೀಲರು ಅವರ ಯಾವುದೇ ಸಮಸ್ಯೆ, ದೂರುಗಳು ಇದ್ದಲ್ಲಿ ವಕೀಲರ ಸಂಘಗಳ ಮೂಲಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ನೇತೃತ್ವದ ದೂರು ಇತ್ಯರ್ಥ ಸಮಿತಿಗೆ ಸಲ್ಲಿಸಬೇಕು.
ವಕೀಲರ ಸಮಸ್ಯೆ, ದೂರಗಳ ಬಗ್ಗೆ, ಮುಷ್ಕರ, ಪ್ರತಿಭಟನೆ ನಡೆಸಲು ಉದ್ದೇಶಿಸಿದ ಸಂಘದ ಪ್ರತಿನಿಧಿಗಳೊಂದಿಗೆ ದೂರು ಇತ್ಯರ್ಥ ಸಮಿತಿ ಸಮಾಲೋಚನೆ ನಡೆಸಿ ಪ್ರತಿಭಟನೆ, ಮುಷ್ಕರ, ಬಹಿಷ್ಕಾರ, ನ್ಯಾಯದಾನದಲ್ಲಿ ಹಸ್ತಕ್ಷೇಪ ಮಾಡಿದಂತಾಗುತ್ತದೆ ಎಂಬುದರ ಬಗ್ಗೆ ಮನವರಿಕೆ ಮಾಡಿಕೊಟ್ಟು ಸಮಸ್ಯೆಗೆ ಸೌಹಾರ್ದಯುತ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸಲಾಗುವುದು. ಒಂದು ವೇಳೆ ದೂರು ಇತ್ಯರ್ಥ ಸಮಿತಿ ಸಲಹೆಯನ್ನು ವಕೀಲರ ಸಂಘಗಳು ಧಿಕ್ಕರಿಸಿದಲ್ಲಿ ನ್ಯಾಯಾಂಗ ನಿಂದನೆ ಬಗ್ಗೆ ಮುಖ್ಯ ನ್ಯಾಯಮೂರ್ತಿಗೆ ವರದಿ ಸಲ್ಲಿಸಲಾಗುವುದು.
ನ್ಯಾಯಾಂಗ ನಿಂದನೆ ಕ್ರಮ ಆರಂಭಿಸಿದಲ್ಲಿ ನ್ಯಾಯಮೂರ್ತಿಗಳು ಅಂತಹ ವಕೀಲರನ್ನು ನಿರ್ಧಿಷ್ಟ ಅವಧಿಗೆ ಅಮಾನತುಗೊಳಿಸಲು ಆದೇಶ ನೀಡಬಹುದು. ಅಮಾನತು ವಾಪಸ್ ಪಡೆಯುವ ಅಧಿಕಾರವನ್ನು ಮುಖ್ಯ ನ್ಯಾಯಮೂರ್ತಿಗಳಿಗೆ ನೀಡಲಾಗಿದೆ.