ಚಿಕ್ಕಮಗಳೂರು: ಚಿನ್ನಾಭರಣ ವರ್ತಕನನ್ನು ಬೆದರಿಸಿ ಪೊಲೀಸರೇ ದರೋಡೆ ಮಾಡಿದ ಘಟನೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಇನ್ಸ್ ಪೆಕ್ಟರ್ ಸೇರಿ ನಾಲ್ವರು ಪೊಲೀಸರನ್ನು ಅಮಾನತು ಮಾಡಲಾಗಿದೆ. ಅಜ್ಜಂಪುರ ಠಾಣೆಯ ಇನ್ಸ್ಪೆಕ್ಟರ್ ಲಿಂಗರಾಜು, ಕಾನ್ ಸ್ಟೇಬಲ್ ಗಳಾದ ಸಖರಾಯಪಟ್ಟಣ ಠಾಣೆಯ ಧನಪಾಲ್ ನಾಯ್ಕ್, ಕುದುರೆಮುಖ ಠಾಣೆಯ ಓಂಕಾರ ಮೂರ್ತಿ, ಲಿಂಗದಹಳ್ಳಿ ಠಾಣೆಯ ಶರತ್ ರಾಜ್ ಅಮಾನತುಗೊಂಡವರು.
ಈ ನಾಲ್ವರ ವಿರುದ್ಧ ಅಜ್ಜಂಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದಾವಣಗೆರೆಯ ಚಿನ್ನಾಭರಣ ವ್ಯಾಪಾರಿ ಭಗವಾನ್ ಸಂಕ್ಲ ಅವರ ಪುತ್ರ ರೋಹಿತ್ ಸಂಕ್ಲ ನ. 17 ರಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ನೀಡಿದ್ದರು.
ಮೇ 11 ರಂದು ರೋಹಿತ್ ಕಾರ್ ನಲ್ಲಿ 2.450 ಕೆಜಿ ಚಿನ್ನಾಭರಣಗಳನ್ನು ದಾವಣಗೆರೆಯಿಂದ ಬೇಲೂರಿಗೆ ತೆಗೆದುಕೊಂಡು ಹೋಗುತ್ತಿದ್ದರು. ದಾರಿಯಲ್ಲಿ ಬುಕ್ಕಾಂಬುದಿ ಟೋಲ್ ಗೇಟ್ ಬಳಿ ಕಾರ್ ತಡೆದು ಸಬ್ ಇನ್ಸ್ಪೆಕ್ಟರ್ ಮತ್ತಿಬ್ಬರು ಕಾರ್ ಹತ್ತಿದ್ದು ಚಿನ್ನಾಭರಣ ಇರುವುದು ತಿಳಿದು ಕಳ್ಳ ಸಾಗಾಣಿಕೆ ಕೇಸ್ ದಾಖಲಿಸುವುದಾಗಿ ಹೇಳಿ 10 ಲಕ್ಷ ರೂಪಾಯಿ ನೀಡಿದರೆ ಬಿಡುವುದಾಗಿ ಬೆದರಿಕೆ ಹಾಕಿದ್ದಾರೆ. ರೋಹಿತ್ ಅಜ್ಜಂಪುರದ ಚಿನ್ನಾಭರಣ ವ್ಯಾಪಾರಿಯಿಂದ 5 ಲಕ್ಷ ರೂ. ಪಡೆದು ಪೊಲೀಸರಿಗೆ ಕೊಟ್ಟಿದ್ದಾರೆ. ಜಿಎಸ್‌ಟಿ ಬಿಲ್ ಗಳನ್ನು ತೋರಿಸಿದರೂ ಚಿನ್ನ ಅಕ್ರಮ ಸಾಗಾಣಿಕೆ ಮಾಡುತ್ತಿರುವುದಾಗಿ ಬೆದರಿಕೆ ಹಾಕಿ ಹಣ ಪಡೆದುಕೊಂಡಿದ್ದಾರೆ. ಬೇರೆಯವರಿಗೆ ವಿಷಯ ತಿಳಿಸಿದರೆ ವ್ಯಾಪಾರಕ್ಕೆ ತೊಂದರೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ. ರೋಹಿತ್ ತಂದೆ ದೂರು ನೀಡಿದ ನಂತ ಪರಿಶೀಲನೆ ನಡೆಸಿ ನಾಲ್ವರನ್ನು ಅಮಾನತು ಮಾಡಲಾಗಿದೆ ಎಂದು ಹೇಳಲಾಗಿದೆ.