ಶಿವಮೊಗ್ಗ: ಶಿಕಾರಿಪುರ ತಾಲೂಕಿನ ತೊಗರ್ಸಿ ಗ್ರಾಮದ ಮಲ್ಲಿಕಾರ್ಜುನ ಸ್ವಾಮಿ ರಥೋತ್ಸವದ ಸಂದರ್ಭದಲ್ಲಿ ವಕೀಲನ ಮೇಲೆ ಹಲ್ಲೆ ಮಾಡಿದ ಶಿಕಾರಿಪುರ ಸಿಪಿಐ ಗುರುರಾಜ್ ಮೈಲಾರ್ ಅವರನ್ನು ಅಮಾನತುಗೊಳಿಸಲಾಗಿದೆ.
ಪೂರ್ವ ವಲಯ ಪೊಲೀಸ್ ಮಹಾನಿರೀಕ್ಷಕ ಡಾ. ಕೆ. ತ್ಯಾಗರಾಜ್ ಅವರು ಆದೇಶ ಹೊರಡಿಸಿದ್ದು, ಶಿಸ್ತುಕ್ರಮ ಬಾಕಿ ಇರಿಸಿಕೊಂಡು ತಕ್ಷಣದಿಂದಲೇ ಜಾರಿಗೆ ಬರುವಂತೆ ಸೇವೆಯಿಂದ ಅಮಾನತು ಮಾಡಿದ್ದಾರೆ.
ತೊಗರ್ಸಿ ಮಲ್ಲಿಕಾರ್ಜುನ ಸ್ವಾಮಿ ರಥೋತ್ಸವದ ಸಂದರ್ಭದಲ್ಲಿ ಸಾರ್ವಜನಿಕರೊಂದಿಗೆ ಸಿಪಿಐ ಅನುಚಿತವಾಗಿ ವರ್ತಿಸಿದ್ದರು. ವಕೀಲ ಜಯದೇವ ಸೇರಿದಂತೆ ಸಾರ್ವಜನಿಕರ ಜೊತೆಗೆ ಅನುಚಿತವಾಗಿ ವರ್ತಿಸಿ ಹಲ್ಲೆ ಮಾಡಿದ್ದರು. ಹಲ್ಲೆಯ ದೃಶ್ಯಾವಳಿಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರಿಯಾಗಿದ್ದರೂ ವಕೀಲನ ವಿರುದ್ಧವೇ ಕೇಸು ದಾಖಲಿಸಲಾಗಿತ್ತು. ಅಲ್ಲದೇ ವಕೀಲನಿಗೆ ಬೇಡಿ ಹಾಕಲಾಗಿದ್ದು, ವಕೀಲರ ಸಂಘದಿಂದ ಈ ಕುರಿತಾಗಿ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿತ್ತು.