ಹಾಸನ: ಹಾಸನ ಜಿಲ್ಲೆ ಬೇಲೂರು ತಾಲೂಕಿನ ನಂದಗೊಂಡನಹಳ್ಳಿ ಗ್ರಾಮದ ಸರ್ವೇ ನಂಬರ್ 16ರಲ್ಲಿ ಅಕ್ರಮವಾಗಿ 126 ಮರ ಕಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾಸನ ಉಪ ಅರಣ್ಯ ಸಂರಕ್ಷಣಾಧಿಕಾರಿ ಡಿ. ಮೋಹನ್ ಕುಮಾರ್ ಅವರನ್ನು ಅಮಾನತುಗೊಳಿಸಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಆದೇಶಿಸಿದೆ.
ಅನುಮತಿ ಇಲ್ಲದೆ ಮರ ಕಡಿಯುವುದು ಅಪರಾಧವಾಗಿದ್ದರೂ, ಸರ್ಕಾರಿ ಜಮೀನಿನಲ್ಲಿ 126 ಮರಗಳನ್ನು ಕಡಿಯಲಾಗಿದೆ. ಹಾಸನ ಉಪ ಅರಣ್ಯ ಸಂರಕ್ಷಣಾಧಿಕಾರಿ ಗಮನಕ್ಕೆ ಇದು ಬಾರದಿರುವುದು ಕರ್ತವ್ಯ ಲೋಪಕ್ಕೆ ಸಾಕ್ಷಿಯಾಗಿದೆ ಎಂದು ಆದೇಶದಲ್ಲಿ ಹೇಳಲಾಗಿದೆ.
ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾಸನ ಉಪ ವಿಭಾಗದ ಸಹಾಯಕ ಉಪ ಅರಣ್ಯ ಸಂರಕ್ಷಣಾಧಿಕಾರಿ ಪ್ರಭುಗೌಡ ಬಿರಾದಾರ, ಬೇಲೂರು ವಲಯ ಅರಣ್ಯ ಅಧಿಕಾರಿ ವಿನಯಕುಮಾರ್, ಉಪವಲಯ ಅರಣ್ಯ ಅಧಿಕಾರಿ ಗುರುರಾಜ್, ಅರಣ್ಯ ಗಸ್ತು ಪಾಲಕ ರಘುಕುಮಾರ್ ಅವರನ್ನು ಗುರುವಾರ ಅಮಾನತು ಮಾಡಲಾಗಿತ್ತು.