
ಬೆಂಗಳೂರು: ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಿಸಿದಂತೆ ದೂರು ನೀಡಲು ಬಂದಿದ್ದ ಸಂತ್ರಸ್ತೆಗೆ ಕಿರುಕುಳ ನೀಡಿದ ಸಬ್ ಇನ್ಸ್ಪೆಕ್ಟರ್ ಅಮಾನತುಗೊಂಡಿದ್ದಾರೆ.
ಬೆಂಗಳೂರು ಬಸವೇಶ್ವರನಗರ ಠಾಣೆ ಸಬ್ ಇನ್ಸ್ಪೆಕ್ಟರ್ ಕೆ.ಟಿ. ಸತೀಶ್ ಅವರನ್ನು ನಗರ ಪೊಲೀಸ್ ಕಮಿಷನರ್ ಅಮಾನತು ಮಾಡಿದ್ದಾರೆ. ಯುವತಿಯೊಬ್ಬರು ಸ್ನೇಹಿತನಿಂದ ಅತ್ಯಾಚಾರ ನಡೆದ ಬಗ್ಗೆ ಬಸವೇಶ್ವರನಗರ ಠಾಣೆಗೆ ದೂರು ಕೊಡಲು ಹೋಗಿದ್ದಾರೆ. ಈ ವೇಳೆ ಆಕೆಯ ದೂರಿಗೆ ಸ್ಪಂದಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳದೆ ಸಬ್ ಇನ್ಸ್ಪೆಕ್ಟರ್ ಸತೀಶ್ ನಿರ್ಲಕ್ಷ್ಯ ತೋರಿದ್ದಾರೆ. ಆರೋಪಿಯಿಂದ ಹಣ ಪಡೆದು ಆತನಿಗೆ ಸಹಕರಿಸಿದ್ದಾರೆ. ಸಂತ್ರಸ್ತೆಯ ಮೊಬೈಲ್ ಜಪ್ತಿ ಮಾಡಿ ಸಾಕ್ಷ್ಯ ನಾಶ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಪೊಲೀಸರ ಕಿರುಕುಳದ ಬಗ್ಗೆ ಸಂತ್ರಸ್ತ ಯುವತಿ ನಗರ ಪೊಲೀಸ್ ಆಯುಕ್ತ ದಯಾನಂದ್ ಅವರಿಗೆ ದೂರು ನೀಡಿದ್ದು, ದೂರನ್ನು ಗಂಭೀರವಾಗಿ ಪರಿಗಣಿಸಿದ ಆಯುಕ್ತರು ವಿಚಾರಣೆ ನಡೆಸಿ ವರದಿ ಸಲ್ಲಿಸುವಂತೆ ಪಶ್ಚಿಮ ವಿಭಾಗದ ಡಿಸಿಪಿ ಲಕ್ಷ್ಮಣ ನಿಂಬರಗಿ ಅವರಿಗೆ ಸೂಚಿಸಿದ್ದರು. ವರದಿ ಆಧರಿಸಿ ಬಸವೇಶ್ವರನಗರ ಠಾಣೆ ಸಬ್ ಇನ್ಸ್ ಪೆಕ್ಟರ್ ಕೆ.ಟಿ. ಸತೀಶ್ ಅವರನ್ನು ಅಮಾನತು ಮಾಡಲಾಗಿದೆ ಎಂದು ಹೇಳಲಾಗಿದೆ.