ಪುತ್ತೂರು: ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಮಾಜಿ ಸಿಎಂ ಡಿ.ವಿ. ಸದಾನಂದ ಗೌಡರ ಭಾವಚಿತ್ರ ಇರುವ ಬ್ಯಾನರ್ ಗೆ ಚಪ್ಪಲಿ ಹಾರ ಹಾಕಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿಂದೂ ಕಾರ್ಯಕರ್ತರನ್ನು ತೀವ್ರವಾಗಿ ಥಳಿಸಿದ್ದ ಪೊಲೀಸರನ್ನು ಸಸ್ಪೆಂಡ್ ಮಾಡಲಾಗಿದೆ.
ಪ್ರಕರಣದಲ್ಲಿ ಬಂಧಿತ ಆರೋಪಿಗಳ ಮೇಲೆ ತೀವ್ರ ಹಲ್ಲೆ ನಡೆಸಿ ಚಿತ್ರಹಿಂಸೆ ನೀಡಿದ್ದ ಎಸ್ಐ ಮತ್ತು ಕಾನ್ಸ್ಟೇಬಲ್ ಅವರನ್ನು ಅಮಾನತುಗೊಳಿಸಿ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಅಧೀಕ್ಷಕರು ಆದೇಶ ಹೊರಡಿಸಿದ್ದಾರೆ.
ಪುತ್ತೂರು ತಾಲೂಕಿನ ನರಿಮೊಗರು ನಿವಾಸಿಗಳಾದ 9 ಮಂದಿಯನ್ನು ಪೊಲೀಸರು ಬಂಧಿಸಿದ್ದರು. ಇವರನ್ನು ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ ಜಾಮೀನಿನ ಮೇಲೆ ಬಿಡುಗಡೆ ಮಾಡಿಸಿದ್ದರು.
ಬಂಧಿತರ ಮೇಲೆ ಪೊಲೀಸರು ದೌರ್ಜನ್ಯ ನಡೆಸಿರುವುದಾಗಿ ಆಕ್ರೋಶ ವ್ಯಕ್ತವಾಗಿತ್ತು. ದೌರ್ಜನ್ಯಕ್ಕೊಳಗಾದ ಇಬ್ಬರು ತೀವ್ರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಗಾಯಾಳು ಅವಿನಾಶ್ ತಂದೆ ವೇಣುನಾಥ ಪುತ್ತೂರು ನಗರ ಠಾಣೆಗೆ ಪೊಲೀಸರ ದೌರ್ಜನ್ಯದ ವಿರುದ್ಧ ದೂರು ನೀಡಿದ್ದರು. ಮೇಲಾಧಿಕಾರಿಗಳು ತನಿಖೆಗೆ ಆದೇಶಿಸಿದ್ದರು.
ವಿಚಾರಣೆ ನಡೆಸಿ ಎಸ್ಐ ಮತ್ತು ಕಾನ್ಸ್ಟೇಬಲ್ ಅವರನ್ನು ಅಮಾನತುಗೊಳಿಸಲಾಗಿದೆ. ಹಲ್ಲೆ ನಡೆಸಿದ ಪೊಲೀಸರ ವಿರುದ್ಧ ಮಾನವ ಹಕ್ಕುಗಳ ಆಯೋಗಕ್ಕೆ ಮತ್ತು ಪರಿಶಿಷ್ಟ ಜಾತಿ ಕಲ್ಯಾಣ ಇಲಾಖೆಗೆ ದೂರು ನೀಡುವುದಾಗಿ ಪುತ್ತೂರು ವಿಧಾನಸಭೆ ಚುನಾವಣೆಯ ಪಕ್ಷೇತರ ಅಭ್ಯರ್ಥಿ ಅರುಣ್ ಕುಮಾರ್ ಪುತ್ತಿಲ ತಿಳಿಸಿದ್ದಾರೆ.
ಗನ್ ತೋರಿಸಿ ಬೆದರಿಸಿ ಬಟ್ಟೆ ಬಿಚ್ಚಿಸಿ ತೊಡೆ, ಪಾದ, ಕೆನ್ನೆಗೆ ಹೊಡೆದರು. ಠಾಣೆಯಲ್ಲಿ ಕೂಡಿಹಾಕಿ ಚಿತ್ರ ಹಿಂಸೆ ನೀಡಿದರು. ಅರುಣ್ ಪುತ್ತಿಲ ಬರದಿದ್ದರೆ ಲಾಕಪ್ ಡೆತ್ ಆಗುತ್ತಿತ್ತು ಎಂದು ತೀವ್ರ ಹಲ್ಲೆಗೊಳಗಾಗಿ ಆಸ್ಪತ್ರೆಗೆ ದಾಖಲಾಗಿರುವ ಅವಿನಾಶ್ ಹೇಳಿದ್ದಾರೆ.