ಕಲಬುರಗಿ: ಮರಳು ಸಾಗಣೆ ಟ್ರ್ಯಾಕ್ಟರ್ ಹರಿಸಿ ಹೆಡ್ ಕಾನ್ಸ್ಟೇಬಲ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ತವ್ಯ ನಿರ್ಲಕ್ಷ ಆರೋಪದಡಿ ಮೂವರು ಪೊಲೀಸರನ್ನು ಅಮಾನತು ಮಾಡಲಾಗಿದೆ.
ಜೇವರ್ಗಿ ಸಿಪಿಐ ಭೀಮನಗೌಡ ಬಿರಾದಾರ, ನೆಲೋಗಿ ಪಿಎಸ್ಐ ಗೌತಮ್, ಸ್ಪೆಷಲ್ ಬ್ರಾಂಚ್ ಪೊಲೀಸ್ ಕಾನ್ಸ್ಟೇಬಲ್ ರಾಜಶೇಖರ ಅವರನ್ನು ಅಮಾನತುಗೊಳಿಸಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಇಶಾ ಪಂತ್ ಆದೇಶ ಹೊರಡಿಸಿದ್ದಾರೆ.
ಜೂನ್ 15ರಂದು ಹೆಡ್ ಕಾನ್ಸ್ಟೇಬಲ್ ಮೈಸೂರ್ ಚೌಹಾಣ್ ಅವರನ್ನು ಮರಳು ಟ್ರ್ಯಾಕ್ಟರ್ ಹರಿಸಿ ಸಾಯಿಬಣ್ಣ ಮತ್ತು ಸಿದ್ದಪ್ಪ ಹತ್ಯೆ ಮಾಡಿದ್ದರು. ಕಲಬುರ್ಗಿ ಜಿಲ್ಲೆ ಜೇವರ್ಗಿ ತಾಲೂಕಿನ ನಾರಾಯಣಪುರ ಬಳಿ ಟ್ರ್ಯಾಕ್ಟರ್ ಹರಿಸಿ ಕೊಲೆ ಮಾಡಲಾಗಿತ್ತು.
ಸಿದ್ದಪ್ಪನನ್ನು ಶುಕ್ರವಾರ ಬಂಧಿಸಲಾಗಿತ್ತು. ಶನಿವಾರ ವಿಜಯಪುರ ಜಿಲ್ಲೆಯಲ್ಲಿ ಸಾಯಿಬಣ್ಣನನ್ನು ಬಂಧಿಸಲಾಗಿದೆ. ಈ ವೇಳೆ ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ ಆರೋಪಿ ಮೇಲೆ ಫೈರಿಂಗ್ ಮಾಡಲಾಗಿದೆ.
ಆರೋಪಿ ಸಾಯಿಬಣ್ಣ 2018 ರಿಂದ ನೆಲೋಗಿ ಠಾಣಾ ವ್ಯಾಪ್ತಿಯ ರೌಡಿಶೀಟರ್ ಆಗಿದ್ದಾನೆ ಎಂದು ಕಲಬುರ್ಗಿಯಲ್ಲಿ ಪೊಲೀಸ್ ವರಿಷ್ಠಾಧಿಕಾರಿ ಇಶಾ ಪಂತ್ ಹೇಳಿದ್ದಾರೆ. ಕಲಬುರ್ಗಿ ಜಿಲ್ಲೆ ಜೇವರ್ಗಿ ತಾಲೂಕಿನ ನಾರಾಯಣಪುರ ಗ್ರಾಮದ ನಿವಾಸಿಯಾಗಿರುವ ಸಾಯಿಬಣ್ಣ ಕರಜಗಿ ವಿರುದ್ಧ ಕೊಲೆ ಯತ್ನ, ಡಕಾಯಿತಿ ಪ್ರಕರಣಗಳಿವೆ. ಜೂನ್ 15ರಂದು ಹೆಡ್ ಕಾನ್ಸ್ಟೇಬಲ್ ಮೈಸೂರು ಚೌಹಾಣ್ ಅವರನ್ನು ಈತ ಮರಳು ಸಾಗಣೆ ಟ್ರ್ಯಾಕ್ಟರ್ ಹರಿಸಿ ಕೊಂದು ಪರಾರಿಯಾಗಿದ್ದ. ರೌಡಿಶೀಟರ್ ಸಾಯಿಬಣ್ಣ ಬಂಧನಕ್ಕೆ ಮೂರು ತಂಡ ರಚಿಸಲಾಗಿತ್ತು. ಆರೋಪಿಗಳಾದ ಸಾಯಿಬಣ್ಣ ಮತ್ತು ಸಿದ್ದಪ್ಪ ಇಬ್ಬರು ಸಹೋದರರಾಗಿದ್ದಾರೆ.