ಶಿವಮೊಗ್ಗ: ಕರ್ತವ್ಯ ಮತ್ತು ಜವಾಬ್ದಾರಿಗಳನ್ನು ನಿಯಮಾನುಸಾರ ನಿರ್ವಹಿಸದ ಇಬ್ಬರು ಅಧಿಕಾರಿಗಳನ್ನು ಕುವೆಂಪು ವಿವಿ ಕುಲಸಚಿವ ಸ್ನೇಹಲ್ ಸುಧಾಕರ್ ಲೋಖಂಡೆ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.
ಎಂಸಿಎ ಮತ್ತು ಕಂಪ್ಯೂಟರ್ ಸೈನ್ಸ್ ಅಧ್ಯಯನ ವಿಭಾಗದ ಡಾ. ಎಂ. ಸುರೇಶ್, ಪ್ರಸಾರಂಗ ವಿಭಾಗದ ಶಾಖಾಧಿಕಾರಿ ಎಂ. ಕರಿಯಪ್ಪ ಅವರನ್ನು ಅಮಾನತು ಮಾಡಲಾಗಿದೆ.
ಸುರೇಶ್ ಅವರು ಮಾನವ ಸಂಪನ್ಮೂಲ ಮತ್ತು ನಿರ್ವಹಣೆ ವಿಭಾಗದಲ್ಲಿ ಉಪ ಕುಲಸಚಿವ ಹುದ್ದೆಯಲ್ಲಿ ನಿಯೋಜನೆಯಲ್ಲಿದ್ದ ಸಂದರ್ಭದಲ್ಲಿ ವಿವಿ ನಿಯಮ ಉಲ್ಲಂಘಿಸಿ ತಮ್ಮ ವಿವೇಚನೆಯಾನುಸಾರ ಕಾರ್ಯನಿರ್ವಹಿಸಿದ್ದರು. ಕರ್ತವ್ಯದಲ್ಲಿ ಬೇಜವಾಬ್ದಾರಿ ಮತ್ತು ದುರ್ವರ್ತನೆ ತೋರಿಸಿದ ಆರೋಪದ ಮೇಲೆ ಅವರನ್ನು ಅಮಾನತು ಮಾಡಲಾಗಿದೆ.
ಈ ಹಿಂದೆ ವಿಶ್ವವಿದ್ಯಾಲಯದ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಘಟಕದಲ್ಲಿ ಹಿರಿಯ ಸಹಾಯಕರ ಹುದ್ದೆಯಲ್ಲಿದ್ದ ಎಂ. ಕರಿಯಪ್ಪ ವಿದ್ಯಾರ್ಥಿವೇತನ ಅನುದಾನ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂಬ ಆರೋಪವಿದೆ. ಇವರಿಬ್ಬರ ಕರ್ತವ್ಯ ಲೋಪಗಳಿಗೆ ಸಂಬಂಧಿಸಿದಂತೆ ಸಿಂಡಿಕೇಟ್ ಅನುಮೋದನೆ ಮತ್ತು ಇಲಾಖಾ ವಿಚಾರಣೆ ಕಾಯ್ದಿರಿಸಿ ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತು ಮಾಡಲಾಗಿದೆ.