ದೆಹಲಿಯಲ್ಲಿ ನಡೆದ ಶ್ರದ್ಧಾ ವಾಕರ್ ಹತ್ಯೆ ಪ್ರಕರಣದ ಮಾದರಿಯ್ಲಲೇ ಮಧ್ಯಪ್ರದೇಶದ ಶಾಹದೋಲ್ ನಲ್ಲಿ ವ್ಯಕ್ತಿಯೊಬ್ಬ ತನ್ನ ಹೆಂಡತಿಯನ್ನು ಕೊಲೆ ಮಾಡಿದ್ದಾನೆ. ದೇಹವನ್ನು ಎರಡು ಭಾಗಗಳಾಗಿ ಕತ್ತರಿಸಿ ಕಾಡಿನಲ್ಲಿ ವಿವಿಧ ಸ್ಥಳಗಳಲ್ಲಿ ಹೂಳಿದ್ದಾನೆ.
ಮೃತರನ್ನು ಸರಸ್ವತಿ ಪಟೇಲ್ ಎಂದು ಗುರುತಿಸಲಾಗಿದ್ದು, ಆಕೆಯ ಪತಿ ರಾಮ್ ಕಿಶೋರ್ ಪಟೇಲ್ ಕೊಲೆ ಆರೋಪಿಯಾಗಿದ್ದಾನೆ. ದಾಂಪತ್ಯ ದ್ರೋಹದ ಶಂಕೆಯಿಂದ ಆರೋಪಿ ತನ್ನ ಪತ್ನಿಯನ್ನು ಕೊಡಲಿಯಿಂದ ಕೊಂದಿದ್ದಾನೆ.
ನವೆಂಬರ್ 13 ರಂದು ವ್ಯಕ್ತಿಯೊಬ್ಬ ತನ್ನ ಸೊಸೆ ನಾಪತ್ತೆ ಬಗ್ಗೆ ದೂರು ನೀಡಿದಾಗ ಘಟನೆ ಬೆಳಕಿಗೆ ಬಂದಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ನಂತರ ನ.15 ರಂದು ಗ್ರಾಮದ ಸಮೀಪದ ಕಾಡಿನಲ್ಲಿ ಮಹಿಳೆಯೊಬ್ಬರ ಬಟ್ಟೆ ಪತ್ತೆಯಾಗಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಲಭಿಸಿತ್ತು.
ಹೆಚ್ಚಿನ ತನಿಖೆಯ ನಂತರ, ಬಟ್ಟೆ ಕಾಣೆಯಾದ ಮಹಿಳೆಯದ್ದು ಎಂದು ಪೊಲೀಸರು ಕಂಡುಕೊಂಡರು. ಅರಣ್ಯದಲ್ಲಿ ಶೋಧ ಕಾರ್ಯಾಚರಣೆ ನಡೆಸಲಾಗಿದ್ದು, ಸ್ಥಳದಲ್ಲಿ ಹೂತಿಟ್ಟ ಸ್ಥಿತಿಯಲ್ಲಿ ತಲೆ ಪತ್ತೆಯಾಗಿದೆ. ಆ ಸ್ಥಳದಿಂದ ಸ್ವಲ್ಪ ದೂರದಲ್ಲಿ ಮುಂಡ ಕೂಡ ಪತ್ತೆಯಾಗಿದೆ. ನಾಪತ್ತೆಯಾದ ಮಹಿಳೆ ಸರಸ್ವತಿಯ ದೇಹದ ಭಾಗಗಳು ಅವು ಎಂದು ಗೊತ್ತಾಗಿದೆ.
ನರಸಿಂಗ್‌ಪುರದ ಕರೇಲಿ ಪ್ರದೇಶದಲ್ಲಿ ಕೊಲೆ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಬಂಧಿಸಲಾಗಿದೆ. ಪೊಲೀಸ್ ವರಿಷ್ಠಾಧಿಕಾರಿ ಕುಮಾರ್ ಪ್ರತೀಕ್ ಪ್ರಕಾರ, ಆರೋಪಿಯು ಅಪರಾಧ ಒಪ್ಪಿಕೊಂಡಿದ್ದಾನೆ. ಪತ್ನಿಯ ಚಾರಿತ್ರ್ಯದ ಬಗ್ಗೆ ಅನುಮಾನಗೊಂಡು ಕಾಡಿಗೆ ಕರೆದೊಯ್ದು ಕೊಡಲಿಯಿಂದ ತಲೆ ಕಡಿದು ಹತ್ಯೆಗೈದಿರುವುದಾಗಿ ಪೊಲೀಸರಿಗೆ ತಿಳಿಸಿದ್ದಾನೆ. ತಲೆ ಮತ್ತು ಮುಂಡವನ್ನು ಪ್ರತ್ಯೇಕವಾಗಿ ಹೂಳಿದರು. ಹತ್ಯೆಗೆ ಬಳಸಿದ್ದ ಕೊಡಲಿಯನ್ನೂ ಪೊಲೀಸರು ವಶಪಡಿಸಿಕೊಂಡಿದ್ದಾರೆ.