ಪಾರಿವಾಳ ಅಂದರೆ ಶಾಂತಿಯ ಸಂಕೇತ……. ಪ್ರೀತಿಯ ಸಂದೇಶ ಹೊತ್ತು ತರುವ ಪಕ್ಷಿ ಅಂತಾನೇ ಎಲ್ಲರೂ ಅಂದುಕೊಂಡಿದ್ದರು. ಆದರೆ ಕಾಲ ಬದಲಾಗಿದೆ, ಕಾಲದ ಜೊತೆ ಜೊತೆ ಜೊತೆಗೆ ಪಾರಿವಾಳದ ಕೆಲಸ ಕೂಡಾ ಬದಲಾಗಿದೆ. ಈಗ ಪಾರಿವಾಳ ಅಂದ್ರೆ ಡಿಟೆಕ್ಟಿವ್ ಮಾಡೋ ಪಕ್ಷಿಯಂತಾಗಿದೆ. ಇತ್ತೀಚೆಗೆ ಒಡಿಶಾದಲ್ಲಿ ಸಿಕ್ಕಿ ಪಾರಿವಾಳ ಆ ಮಾತು ಸತ್ಯ ಅನ್ನೋದಕ್ಕೆ ಸಾಕ್ಷಿ.
ಕ್ಯಾಮೆರಾ ಮತ್ತು ಮೈಕ್ರೋಚಿಪ್ ಉಪಕರಣಗಳನ್ನು ಅಳವಡಿಸಿದ ಪಾರಿವಾಳವೊಂದು ಒಡಿಶಾದ ಜಗತ್‌ಸಿಂಗಪುರ ಜಿಲ್ಲೆಯಲ್ಲಿ ಪತ್ತೆಯಾಗಿದೆ. ಪಾರಾದೀಪ್ ಕರಾವಳಿಯ ಮೀನುಗಾರಿಕೆ ದೋಣಿಯಲ್ಲಿ ಈ ಪಾರಿವಾಳ ಸಿಕ್ಕಿದ್ದು, ಅದನ್ನು ಬೇಹುಗಾರಿಕೆಗೆ ಬಳಸಲಾಗುತ್ತಿತ್ತು ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ.
ಕೆಲವು ದಿನಗಳ ಹಿಂದೆ ತಮ್ಮ ದೋಣಿ ಮೇಲೆ ಕುಳಿತುಕೊಂಡಿದ್ದ ಪಾರಿವಾಳವನ್ನು ಅಲ್ಲಿದ್ದ ಮೀನುಗಾರ ಕಣ್ಣಿಗೆ ಬಿದ್ದಿತ್ತು. ಆ ಹಕ್ಕಿಯನ್ನು ಹಿಡಿದ ಅವರು, ಪಾರಾದೀಪ್‌ನಲ್ಲಿನ ಕರಾವಳಿ ಪೊಲೀಸರಿಗೆ ಬುಧವಾರ ಒಪ್ಪಿಸಿದ್ದಾರೆ.
“ನಮ್ಮ ಪಶುವೈದ್ಯರು ಪಾರಿವಾಳವನ್ನು ತಪಾಸಣೆ ನಡೆಸಿದ್ದಾರೆ. ಅದರ ಕಾಲುಗಳಿಗೆ ಅಳವಡಿಸಿದ್ದ ಸಾಧನಗಳನ್ನು ಪರಿಶೀಲನೆ ಮಾಡಲು ನಾವು ರಾಜ್ಯ ವಿಧಿವಿಜ್ಞಾನ ಪ್ರಯೋಗಾಲಯದ ನೆರವು ಪಡೆಯಲಿದ್ದೇವೆ. ಈ ಸಾಧನಗಳು ಕ್ಯಾಮೆರಾ ಮತ್ತು ಮೈಕ್ರೋ ಚಿಪ್‌ನಂತೆ ಕಂಡುಬರುತ್ತಿವೆ’ ಎಂದು ಜಗತ್‌ಸಿಂಗಪುರದ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಪಿಆರ್ ತಿಳಿಸಿದ್ದಾರೆ.
ಸ್ಥಳೀಯ ಪೊಲೀಸರಿಗೆ ಅರ್ಥವಾಗದ ಭಾಷೆಯಲ್ಲಿ ಯಾರೋ ಪಾರಿವಾಳದ ರೆಕ್ಕೆಗಳ ಮೇಲೆ ಏನನ್ನೂ ಬರೆದಿರುವುದು ಕೂಡ ಕ೦ಡುಬಂದಿದೆ. ಅದರಲ್ಲಿ ಬರೆದಿರುವುದು ಏನು ಎಂಬುದನ್ನು ಕಂಡುಕೊಳ್ಳಲು ಪರಿಣಿತರ ಸಹಾಯವನ್ನು ಕೇಳಲಾಗುವುದು ಎಂದು ಅವರು ಹೇಳಿದ್ದಾರೆ.
ಕೊನಾರ್ಕ್ ಕರಾವಳಿಯಿಂದ ಸುಮಾರು 35 ಕಿಮೀ ದೂರದಲ್ಲಿ ಲಂಗರು ಹಾಕಿದ ದೋಣಿಯ ಮೇಲೆ ಹತ್ತು ದಿನಗಳ ಹಿಂದೆ ಈ ಪಾರಿವಾಳ ಕಂಡುಬಂದಿತ್ತು. ಪಾರಿವಾಳ ಹಾಗೂ ಅದರ ಜತೆಗೆ ದೊರೆತ ಎಲ್ಲ ವಸ್ತುಗಳನ್ನೂ, ಸತ್ಯವನ್ನು ಪತ್ತೆ ಮಾಡುವ ಸಲುವಾಗಿ ಸೈಬರ್ ಪರಿಣತರಿಗೆ ನೀಡಲಾಗುವುದು ಎಂದು ಎಎಸ್‌ಪಿ ನಿಮ್ಮೆ ಚರಣ್ ಸೇಥಿ ತಿಳಿಸಿದ್ದಾರೆ.