ತ್ರಿಶೂರ್: ಯುಎಇಯಿಂದ ಹಿಂದಿರುಗಿದ್ದ ಮಂಕಿಪಾಕ್ಸ್ ಸೋಂಕಿನ ಶಂಕಿತ ಕೇರಳದ ತ್ರಿಶೂರ್‌ನ 22 ವರ್ಷದ ವ್ಯಕ್ತಿಯೊಬ್ಬರು ಶನಿವಾರ ಸಾವನ್ನಪ್ಪಿದ್ದಾರೆ.
ಆರೋಗ್ಯ ಅಧಿಕಾರಿಗಳು ಮೃತರ ಮಾದರಿಗಳನ್ನು ಅಲಪ್ಪುಳದ ರಾಷ್ಟ್ರೀಯ ವೈರಾಲಜಿ ಸಂಸ್ಥೆಗೆ ಕಳುಹಿಸಿದ್ದಾರೆ. WHO ಪ್ರೋಟೋಕಾಲ್ ಗಳ ಪ್ರಕಾರ ಮೃತದೇಹವನ್ನು ಅಂತ್ಯಸಂಸ್ಕಾರ ಮಾಡಲು ಮೃತರ ಕುಟುಂಬ ಸದಸ್ಯರಿಗೆ ತಿಳಿಸಲಾಗಿದೆ.
ವೈದ್ಯರ ಪ್ರಕಾರ, ರೋಗಿಯು ಮಂಕಿಪಾಕ್ಸ್ ಕಾಯಿಲೆಯ ಲಕ್ಷಣಗಳನ್ನು ಹೊಂದಿದ್ದಾನೆ. ಅವರು ದಾಖಲಾದಾಗ ಯಾವುದೇ ಕೆಂಪು ಗುರುತುಗಳು ಅಥವಾ ಗುಳ್ಳೆಗಳು ಇರಲಿಲ್ಲ. ಆದರೆ ನಂತರ ಅವರ ದೇಹದಲ್ಲಿ ಅಂತಹ ಲಕ್ಷಣಗಳು ಕಾಣಿಸಿಕೊಳ್ಳಲು ಪ್ರಾರಂಭಿಸಿದವು.
ರೋಗಿಯು ಯುಎಇಯಿಂದ ಬಂದಿದ್ದರಿಂದ ಅವರನ್ನು ಪ್ರತ್ಯೇಕ ವಾರ್ಡ್‌ಗೆ ದಾಖಲಿಸಲಾಗಿತ್ತು. ಅವರು ಕ್ಷಯರೋಗದಿಂದ ಬಳಲುತ್ತಿದ್ದರು ಎಂಬ ಶಂಕೆ ಕೂಡ ಇದ್ದು, ಪರೀಕ್ಷೆ ನಡೆಸಿದ ನಂತರ ಆಸ್ಪತ್ರೆಯಲ್ಲಿ ಪ್ರತ್ಯೇಕವಾಗಿ ಇರಿಸಲಾಗಿತ್ತು.
ಮೂರು ದಿನಗಳ ಹಿಂದೆ ಯುಎಇಯಿಂದ ವಾಪಸಾಗಿದ್ದ ವ್ಯಕ್ತಿ ತೀವ್ರ ಜ್ವರದಿಂದ ಬಳಲುತ್ತಿದ್ದ. ದೇಹದ ಮೇಲೆ ಕೆಂಪು ಗುಳ್ಳೆಗಳು ಕಾಣಿಸಿಕೊಳ್ಳಲು ಪ್ರಾರಂಭಿಸಿದವು. ಇದು ಮಂಕಿಪಾಕ್ಸ್ ಶಂಕೆ ಮೂಡಿಸಿದೆ ಎಂದು ಸಂಬಂಧಿಕರು ತಿಳಿಸಿದ್ದಾರೆ.
ಮೃತರ ಮಾದರಿ ವರದಿ ಬರುವವರೆಗೆ ಜನರು ಭಯಭೀತರಾಗಬಾರದು. ವರದಿಗಳ ಪ್ರಕಾರ, ವ್ಯಕ್ತಿಗೆ ಪೂರ್ಣ ಪ್ರಮಾಣದ ಮಂಕಿಪಾಕ್ಸ್ ಲಕ್ಷಣಗಳು ಇರಲಿಲ್ಲ. ಹಾಗಾಗಿ ವರದಿ ನೆಗೆಟಿವ್ ಬರುವ ಸಾಧ್ಯತೆಗಳಿವೆ. ಜಗತ್ತಿನಾದ್ಯಂತ ಸಾವಿರಾರು ಪ್ರಕರಣಗಳಲ್ಲಿ, ಇದುವರೆಗೆ ಕೇವಲ ಐದು ಸಾವುಗಳು ಮಂಕಿಪಾಕ್ಸ್ ನಿಂದ ವರದಿಯಾಗಿದೆ ಎಂದು ಆರೋಗ್ಯಾಧಿಕಾರಿಗಳು ತಿಳಿಸಿದ್ದಾರೆ.