ಒಡಿಶಾದ ಪುರಿ ಜಿಲ್ಲೆಯಲ್ಲಿ ಒಬ್ಬ ವ್ಯಕ್ತಿಯಲ್ಲಿ ಏವಿಯನ್ ಇನ್ಫ್ಲುಯೆನ್ಸ(ಬರ್ಡ್ ಫ್ಲೂ) ಸೋಂಕಿನ ಶಂಕಿತ ಪ್ರಕರಣವನ್ನು ಪತ್ತೆಹಚ್ಚಲಾಗಿದೆ. ಇದರ ಬೆನ್ನಲ್ಲೇ ಒಡಿಶಾದ ಆರೋಗ್ಯ ಇಲಾಖೆ ಹೈ ಅಲರ್ಟ್ ಘೋಷಿಸಿದೆ.
ಒಡಿಶಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ಡಾ.ಮುಖೇಶ್ ಮಹಾಲಿಂಗ್ ಅವರು ಪರಿಸ್ಥಿತಿಯನ್ನು ನಿಭಾಯಿಸಲು ಇಲಾಖೆಯು ಸಂಪೂರ್ಣ ಸನ್ನದ್ಧವಾಗಿದೆ ಎಂದು ತಿಳಿಸಿದ್ದಾರೆ.
ಆರೋಗ್ಯ ಇಲಾಖೆ ಅಧಿಕಾರಿಗಳು ಕಟ್ಟೆಚ್ಚರ ವಹಿಸಿದ್ದು, ಪುರಿ ಜಿಲ್ಲೆಯ ಪಿಪಿಲಿ ಮತ್ತು ಸತ್ಯಬಾಡಿ ಬ್ಲಾಕ್ ಗಳಲ್ಲಿ ತೀವ್ರ ನಿಗಾ ವಹಿಸಲಾಗಿದೆ. 1 ಕಿಮೀ ಮತ್ತು 10 ಕಿಮೀ ವ್ಯಾಪ್ತಿಯೊಳಗೆ ಪೀಡಿತ ಪ್ರದೇಶಗಳನ್ನು ಎರಡು ಪದರಗಳ ಕಣ್ಗಾವಲು ಅಡಿಯಲ್ಲಿ ಇರಿಸಲಾಗಿದೆ. ಆಶಾ ಕಾರ್ಯಕರ್ತೆಯರು ಮನೆ-ಮನೆಗೆ ಭೇಟಿ ನೀಡುವ ಮೂಲಕ ಜನರನ್ನು ಜಾಗೃತಗೊಳಿಸುತ್ತಿದ್ದಾರೆ ಎಂದು ಹೇಳಿದ್ದಾರೆ.
ಪುರಿ ಜಿಲ್ಲೆಯ ಎರಡು ಬ್ಲಾಕ್‌ಗಳ ಪೀಡಿತ ಪ್ರದೇಶಗಳಲ್ಲಿ N95 ಮುಖವಾಡಗಳು ಮತ್ತು ಟ್ಯಾಮಿಫ್ಲೂ ಮಾತ್ರೆಗಳನ್ನು ವಿತರಿಸಲಾಗುತ್ತಿದೆ. ಇದಲ್ಲದೇ ಆರೋಗ್ಯ ಇಲಾಖೆ ಅಧಿಕಾರಿಗಳು ಹಕ್ಕಿಜ್ವರದ ಬಗ್ಗೆ ಹಾಗೂ ಜನರು ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಕುರಿತು ಕರಪತ್ರಗಳನ್ನು ಹಂಚುತ್ತಿದ್ದಾರೆ.
ಒಡಿಶಾದ ಸಾರ್ವಜನಿಕ ಆರೋಗ್ಯ ನಿರ್ದೇಶಕ ನೀಲಕಂಠ ಮಿಶ್ರಾ ಸ್ಪಷ್ಟಪಡಿಸಿದ್ದು, ಮಂಗಲ್‌ಪುರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ವ್ಯಕ್ತಿಯಲ್ಲಿ ಬರ್ಡ್ ಫ್ಲೂ ಲಕ್ಷಣಗಳು ಪತ್ತೆಯಾದ ನಂತರ, ಅವರ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆಗಾಗಿ ಭುವನೇಶ್ವರದ ಪ್ರಾದೇಶಿಕ ವೈದ್ಯಕೀಯ ಸಂಶೋಧನಾ ಕೇಂದ್ರ ಮತ್ತು ಪುಣೆ ಭಾರತೀಯ ವೈರಾಲಜಿ ಸಂಸ್ಥೆಗೆ ಕಳುಹಿಸಲಾಗಿದೆ ಎಂದು ತಿಳಿಸಿದ್ದಾರೆ.
ವ್ಯಕ್ತಿಯನ್ನು ಪ್ರತ್ಯೇಕವಾಗಿ ಇರಿಸಲಾಗಿದ್ದು, ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ. ಪಕ್ಷಿ ಜ್ವರದ ಶಂಕಿತ ಪ್ರಕರಣಗಳು ಪತ್ತೆಯಾದ ಹಿನ್ನೆಲೆಯಲ್ಲಿ ಪಿಪಿಲಿಯಲ್ಲಿ ನಿಯಂತ್ರಣ ಕೊಠಡಿಯನ್ನು ಸ್ಥಾಪಿಸಲಾಗಿದೆ ಮತ್ತು ಮಂಗಲ್‌ಪುರ ಸಿಹೆಚ್‌ಸಿಯಲ್ಲಿ ಪ್ರತ್ಯೇಕ ಕೊಠಡಿಯನ್ನು ತೆರೆಯಲಾಗಿದೆ.