ನವದೆಹಲಿ: ಕೇಂದ್ರ ಚುನಾವಣಾ ಆಯೋಗದ ಮುಖ್ಯ ಚುನಾವಣಾ ಆಯುಕ್ತರಾಗಿ ಸುಶೀಲ್ ಚಂದ್ರ ಅವರನ್ನು ನೇಮಕ ಮಾಡಲಾಗಿದ್ದು, ಅವರು ಏಪ್ರಿಲ್ 14 ರಂದು ಅಧಿಕಾರ ವಹಿಸಿಕೊಳ್ಳಲಿದ್ದಾರೆ.
ಏಪ್ರಿಲ್ 13 ರಿಂದ ಜಾರಿಗೆ ಬರುವಂತೆ ಸುಶಿಲ್ ಚಂದ್ರ ಅವರನ್ನು ಮುಖ್ಯ ಚುನಾವಣಾ ಆಯುಕ್ತರಾಗಿ ನೇಮಿಸಲಾಗಿದೆ. ಲೋಕಸಭೆ ಚುನಾವಣೆಗೆ ಮೊದಲು ಫೆಬ್ರವರಿ 14, 2019 ರಂದು ಚುನಾವಣೆ ಆಯುಕ್ತರನ್ನಾಗಿ ಅವರನ್ನು ನಿಯೋಜಿಸಲಾಗಿತ್ತು.
ಇವರ ನೇತೃತ್ವದಲ್ಲಿ ಚುನಾವಣಾ ಆಯೋಗ ಗೋವಾ, ಮಣಿಪುರ, ಉತ್ತರಖಂಡ್, ಪಂಜಾಬ್ ಮತ್ತು ಉತ್ತರಪ್ರದೇಶದಲ್ಲಿ ವಿಧಾನಸಭಾ ಚುನಾವಣೆಗಳನ್ನು ನಡೆಸಲಿದೆ. ಮುಂದಿನ ವರ್ಷ ಮಾರ್ಚ್ ನಲ್ಲಿ ಈ ರಾಜ್ಯಗಳ ವಿಧಾನಸಭೆ ಅವಧಿ ಮುಕ್ತಾಯವಾಗಲಿದೆ. ಉತ್ತರ ಪ್ರದೇಶ ವಿಧಾನಸಭೆ ಅವಧಿ ಮುಂದಿನ ವರ್ಷ ಮೇ 14ರಂದು ಕೊನೆಯಾಗಲಿದೆ.
ಅವರ 5 ವರ್ಷಗಳ ಅವಧಿ ಮುಗಿಯುವ ಮೊದಲೇ ವಿಧಾನಸಭೆಗಳಿಗೆ ಚುನಾವಣೆ ನಡೆಸಬೇಕಿದೆ. ಚುನಾವಣಾ ಆಯುಕ್ತರಾಗುವ ಮೊದಲು ಸುಶಿಲ್ ಚಂದ್ರ ಕೇಂದ್ರ ನೇರ ತೆರಿಗೆ ಮಂಡಳಿ ಅಧ್ಯಕ್ಷರಾಗಿದ್ದರು.
ಮುಖ್ಯ ಚುನಾವಣಾ ಆಯುಕ್ತ ಸುನೀಲ್ ಅರೋರಾ ನಾಳೆ ಅಧಿಕಾರದಿಂದ ನಿರ್ಗಮಿಸಲಿದ್ದು, ಮರುದಿನ ಸುಶಿಲ್ ಚಂದ್ರ ಅಧಿಕಾರ ವಹಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗಿದೆ.