
ಬೀದರ್: ಬೀದರ್ ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ಸೂರ್ಯಕಾಂತ ನಾಗಮಾರಪಲ್ಲಿ ಜೆಡಿಎಸ್ ಸೇರ್ಪಡೆಯಾಗಿದ್ದಾರೆ.
ಬೆಂಗಳೂರಿನಲ್ಲಿ ಭಾನುವಾರ ರಾತ್ರಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಸಮ್ಮುಖದಲ್ಲಿ ಜೆಡಿಎಸ್ ಪಕ್ಷ ಸೇರಿದ ಸೂರ್ಯಕಾಂತ ನಾಗಮಾರಪಲ್ಲಿ ಬೀದರ್ ವಿಧಾನಸಭೆ ಕ್ಷೇತ್ರದಿಂದ ಕಣಕ್ಕಿಳಿಯುವುದು ಖಚಿತವಾಗಿದೆ.
2009ರ ಉಪಚುನಾವಣೆ ಮತ್ತು 2018ರ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಕಾಂಗ್ರೆಸ್ ಪಕ್ಷದ ರಹೀಮ್ ಖಾನ್ ವಿರುದ್ಧ ಸೂರ್ಯಕಾಂತ ನಾಗಮಾರಪಲ್ಲಿ ಸೋಲು ಕಂಡಿದ್ದರು. ಈಗಾಗಲೇ ಜೆಡಿಎಸ್ ಪಕ್ಷದಿಂದ ರಮೇಶ್ ಪಾಟಿಲ್ ಸೋಲಾಪುರ ಅವರನ್ನು ಬೀದರ್ ಕ್ಷೇತ್ರದ ಅಭ್ಯರ್ಥಿಯಾಗಿ ಘೋಷಣೆ ಮಾಡಲಾಗಿದ್ದು, ಸೂರ್ಯಕಾಂತ ನಾಗಮಾರಪಲ್ಲಿ ಸೇರ್ಪಡೆಯಾಗಿರುವುದರಿಂದ ಅವರಿಗೆ ಟಿಕೆಟ್ ನೀಡುವುದು ಖಚಿತ ಎಂದು ಹೇಳಲಾಗಿದೆ,
1989 ಮತ್ತು 1994 ರಲ್ಲಿ ಸೂರ್ಯಕಾಂತ ನಾಗಮಾರಪಲ್ಲಿ ಅವರ ತಂದೆ ದಿ. ಗುರುಪಾದಪ್ಪ ನಾಗಮಾರಪಲ್ಲಿ ಶಾಸಕರಾಗಿ ನಂತರ ಸಚಿವರಾಗಿ ಕಾರ್ಯನಿರ್ವಹಿಸಿದ್ದರು. ಸೂರ್ಯಕಾಂತ ನಾಗಮಾರಪಲ್ಲಿ ಒಂದೂವರೆ ದಶಕದಿಂದ ಬಿಜೆಪಿಯಲ್ಲಿದ್ದರು. ಟಿಕೆಟ್ ಸಿಗದ ಕಾರಣ ಜೆಡಿಎಸ್ ನಿಂದ ಸ್ಪರ್ಧಿಸಲಿದ್ದಾರೆ.