ಸೂರು ಹಾಗೂ ಆಹಾರವಿಲ್ಲದೇ ಎರಡು ದಿನಗಳ ಮಟ್ಟಿಗೆ ಇರುವುದು ಎಂದರೆ ಎಂಥ ವಯಸ್ಕರಿಗೂ ಹಿಂಸೆಯ ಅನುಭವವೇ. ಅಂಥದ್ದರಲ್ಲಿ ಕಾಡಿನಲ್ಲಿ ಒಬ್ಬಳೇ ಇರಬೇಕಾದ ಪರಿಸ್ಥಿತಿಯನ್ನು ಪುಟ್ಟ ಬಾಲಕಿಯೊಬ್ಬಳು ಎದುರಿಸುವುದನ್ನು ಒಮ್ಮೆ ಊಹಿಸಿಕೊಳ್ಳಿ..
ಆರು ವರ್ಷದ ಹೇಲೇ ಜ಼ೇಗಾ ಕಾಡಿನಲ್ಲಿ ಆಹಾರ ಹಾಗೂ ಸೂರಿಲ್ಲದೇ ಎರಡು ದಿನ ಕಳೆದು ಬಂದ ಕಥೆ 22 ವರ್ಷಗಳ ಹಿಂದೆ ವರದಿಯಾಗಿತ್ತು. ಆ ಕಥೆಯೀಗ ಆನ್ಲೈನ್‌ನಲ್ಲಿ ವೈರಲ್ ಆಗಿ ಜನಪ್ರಿಯತೆ ಪಡೆಯುತ್ತಿದೆ.
ಏಪ್ರಿಲ್ 29, 2001ರಲ್ಲಿ ಅರ್ಕಾನ್ಸಾಸ್‌ನ ಒಜ಼ಾರ್ಕ್ ರಾಷ್ಟ್ರೀಯ ಅಭಯಾರಣ್ಯದಲ್ಲಿ ಜ಼ೇಗಾ ತನ್ನ ಅಜ್ಜ-ಅಜ್ಜಿಯೊಂದಿಗೆ ಹೈಕಿಂಗ್‌ಗೆ ಹೋಗಿದ್ದಳು. ಈ ವೇಳೆ ಅಲ್ಲಿನ ಜಲಪಾತವೊಂದನ್ನು ನೋಡುವ ಆಸೆಯಲ್ಲಿ ತನ್ನ ಅಜ್ಜ-ಅಜ್ಜಿಯರ ದಾರಿಯನ್ನು ಬಿಟ್ಟು ಬೇರೆ ದಾರಿ ಹಿಡಿದ ಹೇಲೇ ಅವರಿಂದ ದೂರವಾಗಿಬಿಟ್ಟಳು. ಇದಾದ ಬಳಿಕ ಕಾಡಿನಲ್ಲಿ ತಾನೊಬ್ಬಳೇ ಎರಡು ದಿನಗಳನ್ನು ಕಳೆದಿದ್ದಾಳೆ ಹೇಲೇ. ಈ ವೇಳೆ ಅನ್ನ ಹಾಗೂ ಸೂರಿಲ್ಲದೇ ಬಚಾವಾಗಿ ಬಂದ ಆಕೆಗೆ ಈಗ 27 ವರ್ಷ ವಯಸ್ಸು.
ಆ ಘಟನೆ ಕುರಿತು ಈಗ ಮಾತನಾಡಿದ ಹೇಲೇ, “ನಾನು ಕಳೆದುಹೋದ ಕ್ಷಣದಿಂದಲೇ ನನಗೆ ಕಾಲ್ಪನಿಕ ಗೆಳತಿ ಆಲಿಸಾ ಪ್ರತ್ಯಕ್ಷಳಾದಂತೆ ಭಾಸವಾಗಿ ನನ್ನನ್ನು ಆ ಪರಿಸ್ಥಿತಿಯಲ್ಲಿ ಶಾಂತವಾಗಿಟ್ಟು, ಸಕಾರಾತ್ಮಕ ಆಲೋಚನೆಗಳಿಗೆ ನೀರೆರೆಯುತ್ತಿದ್ದಳು. ಕೆಲವೊಮ್ಮೆ ನಾನು ಅಲ್ಲಿರಬಾರದಿತ್ತು ಎಂದು ಅನಿಸಿದ್ದೂ ಇದೆ ಮತ್ತು ರಾತ್ರಿಗಳನ್ನು ಕಳೆಯುವುದು ಬಹಳ ಕಷ್ಟವಾದ ಕೆಲಸವಾಗಿತ್ತು,” ಎನ್ನುತ್ತಾರೆ.
ಈ ಪರಿಸ್ಥಿತಿಯಲ್ಲಿ ಸುಮ್ಮನೇ ಕುಳಿತು ಅಳುವುದರ ಬದಲು ಕಾಡಿನಲ್ಲಿ ತನ್ನ ಹೈಕಿಂಗ್ ಮುಂದುವರೆಸಿದ ಹೇಲೇ ಅಲ್ಲಿ ತಾನು ಕಳೆದ ಎರಡನೇ ರಾತ್ರಿ ನಿದ್ರೆ ಮಾಡಲು ಗುಹೆಯೊಂದನ್ನು ಕಂಡುಕೊಂಡಿದ್ದಳು.
ಹೇಲೇಳ ಪತ್ತೆಗಾಗಿ ಹೊರಟ 1000 ಪುರುಷರ ಪತ್ತೆ ತಂಡದಲ್ಲಿದ್ದ ವಿಯಮ್ ಜೆಫ್ ವಿಲ್ಲಿನೆಸ್ ಹಾಗೂ ಲೈಟ್ಲೆ ಜೇಮ್ಸ್ ಹೆಸರಿನ ಇಬ್ಬರು ಆಕೆಯನ್ನು ಪತ್ತೆ ಮಾಡಿದ್ದರು. ಈ ವೇಳೆ ತೆಗೆಯಲಾದ ಫೋಟೋವೊಂದರಲ್ಲಿ, ಆ ಇಬ್ಬರು ಪುರುಷರಲ್ಲಿ ಒಬ್ಬರು ಹೇಲೇಗೆ ಡಯಟ್ ಕೋಕ್ ಕೊಡುತ್ತಿರುವುದನ್ನು ನೋಡಬಹುದಾಗಿದೆ.
ಸಾಮಾನ್ಯವಾಗಿ ಜನರಿಗೆ ಸಹಾಯ ಮಾಡುವ ಮನಸ್ಸು ಇದ್ದೇ ಇರುತ್ತದೆ ಎಂದು ನಂಬಿದ್ದ ಹೇಲೇಗೆ ಆ ಕಠಿಣ ಪರಿಸ್ಥಿತಿಯಲ್ಲೂ ಸಕಾರಾತ್ಮಕವಾಗಿ ಇರಲು ಸಾಧ್ಯವಾಗಿತ್ತು.