ಬೆಂಗಳೂರು: ನಾಲ್ಕು ವರ್ಷದ ಪದವಿ ಬೇಡ ಎಂದು ಸಮೀಕ್ಷೆಯಲ್ಲಿ ವಿದ್ಯಾರ್ಥಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ವಿದೇಶಿ ವಿವಿಗಳಿಗೆ ಶೇಕಡ 86ರಷ್ಟು ಜನರಿಂದ ವಿರೋಧ ವ್ಯಕ್ತವಾಗಿದೆ.
AIDSO ಜನಪರ ಶಿಕ್ಷಣ ನೆತ್ತಿಗೆ ಸಂಬಂಧಿಸಿದಂತೆ ರಾಜ್ಯದ 23,000ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪೋಷಕರು ಶಿಕ್ಷಕರ ಅಭಿಪ್ರಾಯ ಸಂಗ್ರಹಿಸಿ ಸಿದ್ಧಪಡಿಸಿದ ಸಮೀಕ್ಷೆ ಬಿಡುಗಡೆ ಮಾಡಿದೆ. ನಾಲ್ಕು ವರ್ಷದ ಪದವಿ ಅಧ್ಯಯನ ಕೈಬಿಡುವಂತೆ ಶೇಕಡ 83 ರಷ್ಟು ಮಂದಿ, ವಿದೇಶಿ ವಿವಿಗಳು ನಮ್ಮ ದೇಶಕ್ಕೆ ಬೇಡ ಎಂದು ಶೇಕಡ 86ರಷ್ಟು ಮಂದಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಪ್ರಶ್ನಾವಳಿಗಳ ಮೂಲಕ ಈ ಮಾದರಿ ಸಮೀಕ್ಷೆ ನಡೆಸಲಾಗಿದೆ. ಸರ್ಕಾರಿ ಶಿಕ್ಷಣ ಸಂಸ್ಥೆಗಳನ್ನು ನಡೆಸಲು ಕಾರ್ಪೊರೇಟ್ ಕಂಪನಿಗಳ ಬಳಿ ಧನ ಸಹಾಯ ಪಡೆಯುವುದು ತಪ್ಪು ಎಂದು ಶೇಕಡ 80ರಷ್ಟು ಮಂದಿ ಅಭಿಪ್ರಾಯ ತಿಳಿಸಿದ್ದಾರೆ. ದೇಶದಲ್ಲಿ ಶೈಕ್ಷಣಿಕ ಕ್ಷೇತ್ರದಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆ, ವಿದೇಶಿ ವಿವಿಗಳು ಬೇಡವೆಂದು ಶೇಕಡ 86ರಷ್ಟು ಮಂದಿ, ನಾಲ್ಕು ವರ್ಷದ ಪದವಿ ಬೇಡವೆಂದು ಶೇಕಡ 83 ರಷ್ಟು ಮಂದಿ ತಿಳಿಸಿದ್ದಾರೆ.
ಕಡಿಮೆ ದಾಖಲಾತಿ ಹೆಸರಲ್ಲಿ ಸರ್ಕಾರಿ ಶಾಲೆ ವಿಲೀನ ಮಾಡುವುದು, ಮುಚ್ಚುವುದು ತಪ್ಪು ಎಂದು ಶೇಕಡ 99 ರಷ್ಟು ಮಂದಿ ಹೇಳಿದ್ದು, ಸ್ವಾತಂತ್ರ್ಯ ಸಂಗ್ರಾಮದ ಕ್ರಾಂತಿಕಾರಿಗಳು, ನವೋದಯ ಚಿಂತಕರ ಕುರಿತ ಪಾಠಗಳು ಪಠ್ಯಕ್ರಮದ ಭಾಗವಾಗಬೇಕು ಎಂದು ಶೇಕಡ 97 ರಷ್ಟು ಮಂದಿ, ಎಲ್ಲಾ ಜಿಲ್ಲೆಗಳಲ್ಲಿ ಇಂಜಿನಿಯರಿಂಗ್ ಕಾಲೇಜ್ ಸ್ಥಾಪಿಸಬೇಕೆಂದು ಶೇಕಡ 97 ರಷ್ಟು ಮಂದಿ ಆಶಯ ವ್ಯಕ್ತಪಡಿಸಿದ್ದಾರೆ.
AIDSO ರಾಜ್ಯ ಕಾರ್ಯದರ್ಶಿ ಅಜಯ್ ಕಾಮತ್ ಬಗ್ಗೆ ಮಾಹಿತಿ ನೀಡಿ, ರಾಜ್ಯದ 9 ಸರ್ಕಾರಿ ವಿವಿ, 82 ಸರ್ಕಾರಿ ಪದವಿ ಕಾಲೇಜು, 12 ಸರ್ಕಾರಿ ಇಂಜಿನಿಯರಿಂಗ್ ಕಾಲೇಜು, 15 ಸರ್ಕಾರಿ ವಿದ್ಯಾರ್ಥಿ ವಸತಿ ನಿಲಯಗಳಿಂದ 23,120 ಜನರು ಸಮೀಕ್ಷೆಯಲ್ಲಿ ಪಾಲ್ಗೊಂಡಿರುವುದಾಗಿ ಹೇಳಿದ್ದಾರೆ.