ಬೆಂಗಳೂರು: ಪರವಾನಿಗೆ ಭೂಮಾಪಕರಿಗೆ ಕಂದಾಯ ಆಸ್ತಿ ಸರ್ವೆ ಅಧಿಕಾರ ನೀಡಲಾಗುವುದು. ಶೀಘ್ರದಲ್ಲಿಯೇ ಕಾನೂನು ತಿದ್ದುಪಡಿ ತರಲಾಗುವುದು ಎಂದು ಕಂದಾಯ ಸಚಿವ ಆರ್. ಅಶೋಕ ತಿಳಿಸಿದ್ದಾರೆ.
ವಿಧಾನಸಭೆಯಲ್ಲಿ ಪ್ರಶ್ನೋತ್ತರ ವೇಳೆಯಲ್ಲಿ ಕಾಂಗ್ರೆಸ್ ಸದಸ್ಯ ಡಾ. ಯತೀಂದ್ರ ಸಿದ್ದರಾಮಯ್ಯ ಅವರ ಪ್ರಶ್ನೆಗೆ ಉತ್ತರ ನೀಡಿದ ಸಚಿವರು, ರಾಜ್ಯದಲ್ಲಿ 4020 ಭೂಮಾಪಕರ ಮಂಜೂರಾದ ಹುದ್ದೆಗಳು ಇದ್ದು, 3379 ಭರ್ತಿಯಾಗಿವೆ. ಭೂ ಮಾಪಕರ ಕೊರತೆಯಿಂದ 2 ಲಕ್ಷ ಅರ್ಜಿಗಳು ಇತ್ಯರ್ಥವಾಗದೇ ಬಾಕಿ ಉಳಿದಿದ್ದು, ಇವುಗಳನ್ನು ವಿಲೇವಾರಿ ಮಾಡಲು ಶೀಘ್ರವೇ 3000 ಪರವಾನಿಗೆ ಭೂಮಾಪಕರ ನೇಮಕಾತಿ ಮಾಡಿಕೊಳ್ಳಲು ಕ್ರಮಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ.
ಈಗಾಗಲೇ 800 ಭೂಮಾಪಕರನ್ನು ನೇಮಕ ಮಾಡಿಕೊಳ್ಳಲಾಗಿದ್ದು, ಇವರಿಗೆ ಕಂದಾಯ ಇಲಾಖೆ ಆಸ್ತಿಗಳ ಸರ್ವೆ ನಡೆಸಲು ಅಧಿಕಾರ ನೀಡುವ ಕುರಿತಂತೆ ಕಾನೂನಿಗೆ ತಿದ್ದುಪಡಿ ತರಲಾಗುತ್ತದೆ ಎಂದು ಹೇಳಿದ್ದಾರೆ.
ಖಾಸಗಿ ಭೂಮಾಪಕರಿಗೆ ಇನಾಂ, ಪೋಡಿ ಮುಕ್ತ ಗ್ರಾಮ, ಕೆರೆ, ಹೊಸದಾಗಿ ಘೋಷಿಸಿದ ಕಂದಾಯ ಗ್ರಾಮಗಳ ಸರ್ವೆ ಮಾಡಲು ಅಧಿಕಾರ ಇಲ್ಲದ ಕಾರಣ ಸಮಸ್ಯೆಯಾಗುತ್ತಿದೆ. ತಾಲೂಕಿನಲ್ಲಿ ಒಬ್ಬರು ಮಾತ್ರ ಸರ್ಕಾರಿ ಭೂಮಾಪಕರು ಇರುತ್ತಾರೆ. ಭೂಮಾಪಕರ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಕಾಯಂ ನೇಮಕಾತಿ ಮಾಡಿಕೊಳ್ಳಬೇಕು ಎಂದು ಯತೀಂದ್ರ ಸಿದ್ದರಾಮಯ್ಯ ಹೇಳಿದ್ದಾರೆ.