ನವದೆಹಲಿ: ಜಾರಿ ನಿರ್ದೇಶನಾಲಯ (ಇಡಿ) ತನಿಖೆ ನಡೆಸುತ್ತಿರುವ ಮನಿ ಲಾಂಡರಿಂಗ್ ಪ್ರಕರಣದಲ್ಲಿ ದೆಹಲಿ ಮಾಜಿ ಆರೋಗ್ಯ ಸಚಿವ ಸತ್ಯೇಂದರ್ ಜೈನ್ ಅವರ ಜಾಮೀನು ಅರ್ಜಿಯನ್ನು ಸುಪ್ರೀಂ ಕೋರ್ಟ್ ಸೋಮವಾರ ತಿರಸ್ಕರಿಸಿದೆ.
ನ್ಯಾಯಮೂರ್ತಿಗಳಾದ ಬೇಲಾ ಎಂ ತ್ರಿವೇದಿ ಮತ್ತು ಪಂಕಜ್ ಮಿಥಾಲ್ ಅವರ ನ್ಯಾಯಪೀಠವು ಮಧ್ಯಂತರ ಜಾಮೀನಿನ ಮೇಲೆ ಹೊರಗಿರುವ ಆಮ್ ಆದ್ಮಿ ಪಕ್ಷದ (ಎಎಪಿ) ನಾಯಕನಿಗೆ “ತಕ್ಷಣ ಶರಣಾಗುವಂತೆ” ಕೇಳಿದೆ.
ಶರಣಾಗಲು ಒಂದು ವಾರದ ರಿಯಾಯಿತಿ ಅವಧಿಯನ್ನು ನೀಡುವಂತೆ ಜೈನ್ ಅವರ ಕಾನೂನು ಪ್ರತಿನಿಧಿ ಸಲ್ಲಿಸಿದ್ದ ಮೌಖಿಕ ಮನವಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ. ಜನವರಿ 17 ರಂದು, ಉನ್ನತ ನ್ಯಾಯಾಲಯವು ಅವರ ನಿಯಮಿತ ಜಾಮೀನು ಅರ್ಜಿಯ ತೀರ್ಪನ್ನು ಕಾಯ್ದಿರಿಸಿತ್ತು.