ಜೀವನದಲ್ಲಿ ಒಮ್ಮೆಯಾದರೂ ವಿಮಾನ ಪ್ರಯಾಣ ಮಾಡಬೇಕು ಎಂಬ ಆಸೆ ಎಲ್ಲರಿಗೂ ಸಹಜ. ಆದರೆ ವಿಮಾನದ ಟಿಕೆಟ್ ದುಬಾರಿಯಾಗಿರೋದ್ರಿಂದ ಬಡ ಮತ್ತು ಮಧ್ಯಮವರ್ಗದವರು ಪ್ರಯಾಣ ಮಾಡಲು ಹಿಂದೇಟು ಹಾಕುತ್ತಾರೆ. ಆದ್ರೀಗ ಕೇವಲ 150 ರೂಪಾಯಿಗಳಲ್ಲಿ ವಿಮಾನದಲ್ಲಿ ಪ್ರಯಾಣಿಸಬಹುದು.
ಈ ದುಬಾರಿ ದುನಿಯಾದಲ್ಲಿ 150 ರೂಪಾಯಿಗೆ ಎಸಿ ರೈಲು ಅಥವಾ ಎಸಿ ಬಸ್‌ನಲ್ಲಿ ಪ್ರಯಾಣಿಸಲು ಸಹ ಸಾಧ್ಯವಿಲ್ಲ. ಅಂಥದ್ರಲ್ಲಿ ವಿಮಾನ ಪ್ರಯಾಣ ಇಷ್ಟೊಂದು ಅಗ್ಗವೆಂದರೆ ನಂಬಲಸದಾಧ್ಯ. ಆದರೆ ಇದು ದೇಶದ ಅತ್ಯಂತ ಅಗ್ಗದ ವಿಮಾನ. ಇದರಲ್ಲಿ ಕೇವಲ 150 ರೂಪಾಯಿಗಳಲ್ಲಿ ಪ್ರಯಾಣಿಸಬಹುದು.
ಅಸ್ಸಾಂನಲ್ಲಿ ಅತ್ಯಂತ ಅಗ್ಗದ ವಿಮಾನಗಳಿವೆ. ಕೇಂದ್ರ ಸರ್ಕಾರದ ‘ಉಡಾನ್ ಸ್ಕೀಮ್’ ಅಡಿಯಲ್ಲಿ 150 ರೂಪಾಯಿಗೆ ವಿಮಾನದಲ್ಲಿ ಪ್ರಯಾಣಿಸುವ ಅವಕಾಶವನ್ನು ಏರ್ ಲೈನ್ಸ್ ನೀಡುತ್ತಿದೆ. ಈ ವಿಮಾನವು ತೇಜ್‌ಪುರದಿಂದ ಲಖಿಂಪುರ ಜಿಲ್ಲೆಯ ಲಿಲಾಬರಿ ವಿಮಾನ ನಿಲ್ದಾಣಕ್ಕೆ ಹಾರಾಟ ನಡೆಸಲಿದೆ.
ಕೇವಲ 25 ನಿಮಿಷಗಳಲ್ಲಿ 4 ಗಂಟೆಗಳ ಪ್ರಯಾಣ !
ಈ ಮಾರ್ಗದಲ್ಲಿ ಪ್ರತಿದಿನ 2 ವಿಮಾನಗಳಿವೆ. ಕಳೆದ 2 ತಿಂಗಳುಗಳಿಂದ ಎಲ್ಲಾ ವಿಮಾನಗಳು ಸಂಪೂರ್ಣವಾಗಿ ಬುಕ್ ಆಗಿವೆ. ತೇಜ್‌ಪುರದಿಂದ ಲಿಲಾಬಾರಿಗೆ ಬಸ್‌ನಲ್ಲಿ ಹೋದರೆ ಸುಮಾರು 216 ಕಿಮೀ ಪ್ರಯಾಣಿಸಲು 4 ಗಂಟೆಗಳೇ ಬೇಕು. ಆದರೆ ವಿಮಾನದಲ್ಲಿ ಕೇವಲ 150 ಕಿಮೀ ಅಂತರವಿದ್ದು, 25 ನಿಮಿಷಗಳಲ್ಲಿ ತಲುಪಬಹುದು.
ಈ ಪ್ರಯಾಣಕ್ಕೆ ಏಕಮುಖ ದರ 150 ರೂಪಾಯಿ. ಇದೇ ಮಾರ್ಗದಲ್ಲಿ ಕೋಲ್ಕತ್ತಾ ಮೂಲಕ ತೆರಳುವುದಾದರೆ ವಿಮಾನ ಟಿಕೆಟ್ ದರ 450 ರೂಪಾಯಿ ಇದೆ. ಸರ್ಕಾರ ಇಲ್ಲಿ ಅಗ್ಗದ ವಿಮಾನ ಸೌಲಭ್ಯವನ್ನು ಪ್ರಾರಂಭಿಸಿದಾಗಿನಿಂದ ವಿಮಾನಗಳೆಲ್ಲ ಶೇ.95 ರಷ್ಟು ಭರ್ತಿಯಾಗುತ್ತಿವೆ.
ಈ ಮಾರ್ಗದ ಪ್ರಯಾಣ ದರವನ್ನು ಕೈಗೆಟುಕುವಂತೆ ಮಾಡಲು ಸರ್ಕಾರವು ಉಡಾನ್ ಯೋಜನೆಯನ್ನು ಪ್ರಾರಂಭಿಸಿದೆ. ಇದರೊಂದಿಗೆ ಸರ್ಕಾರದಿಂದ ವಿಮಾನಯಾನ ಸಂಸ್ಥೆಗಳಿಗೆ ವಯಾಬಿಲಿಟಿ ಗ್ಯಾಪ್ ಫಂಡಿಂಗ್ (ವಿಜಿಎಫ್) ನೀಡಲಾಗುತ್ತಿದೆ. 2017ರಲ್ಲಿ ಉಡಾನ್ ಯೋಜನೆಯನ್ನು ಪ್ರಾರಂಭಿಸಲಾಯಿತು. ಈ ಯೋಜನೆಯಡಿ ಇಂಫಾಲ್‌ನಿಂದ ಶಿಲ್ಲಾಂಗ್‌ಗೆ ನೇರ ವಿಮಾನ ಸೌಲಭ್ಯವಿದೆ.