ಮೈಸೂರು: ಶಸ್ತ್ರಚಿಕಿತ್ಸೆಗೆ ಲಂಚಕ್ಕೆ ಬೇಡಿಕೆ ಇಟ್ಟಿದ್ದ ವೈದ್ಯರೊಬ್ಬರಿಗೆ ಲೋಕಾಯುಕ್ತ ನ್ಯಾಯಾಲಯ 4 ವರ್ಷ ಜೈಲುಶಿಕ್ಷೆ ವಿಧಿಸಿ ಆದೇಶ ಹೊರಡಿಸಿದೆ.
ಮೈಸೂರಿನ ಕೃಷ್ಣರಾಜೇಂದ್ರ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರಾಗಿದ್ದ ಡಾ.ಪಿ.ಪುಟ್ಟಸ್ವಾಮಿ ಎಂಬುವವರಿಗೆ ನ್ಯಾಯಾಲಯ 4 ವರ್ಷ ಜೈಲು ಶಿಕ್ಷೆ ಹಾಗೂ 50 ಸಾವಿರ ದಂಡ ವಿಧಿಸಿದೆ. ಮೈಸೂರಿನ ಮೂರನೇ ಅಪರ ಜಿಲ್ಲಾ ಸತ್ರ ಮತ್ತು ಲೋಕಾಯುಕ್ತ ವಿಶೇಷ ನ್ಯಾಯಾಲಯ ಆದೇಶ ನೀಡಿದೆ.
2017ರಲ್ಲಿ ಶಿವಕುಮಾರ್ ಎಂಬುವವರು ಅಪಘಾತದಲ್ಲಿ ಗಾಯಗೊಂಡು ಕೆ.ಆರ್.ಆಸ್ಪತ್ರೆಗೆ ದಾಖಲಾಗಿದ್ದರು. ಮೂಳೆ ಶಸ್ತ್ರಚಿಕಿತ್ಸಕ ಡಾ.ಪುಟ್ಟಸ್ವಾಮಿ ಶಸ್ತ್ರಚಿಕಿತ್ಸೆಗಾಗಿ ಶಿವಕುಮಾರ್ ಸಹೋದರ ಸಂಬಂಧಿ ಬಳಿ 40 ಸಾವಿರ ಲಂಚಲಕ್ಕೆ ಬೇಡಿಕೆ ಇಟ್ಟಿದ್ದರು. ಹಣ ನೀಡುವ ವಿಚಾರವಾಗಿ ವೈದ್ಯರ ಬಳಿ ಮಾತನಾಡಿರುವುದನ್ನು ಮೊಬೈಲ್ ನಲ್ಲಿ ಚಿತ್ರೀಕರಿಸಿಕೊಂಡಿದ್ದ ದೇವರಾಜು ಎಂಬುವವರು ಆರಂಭದಲ್ಲಿ 2 ಸಾವಿರ ಹಣ ನೀಡಿದ್ದಾರೆ. ಬಾಕಿ ಹಣ ನೀಡುವ ಮೊದಲು ಎಸಿಬಿಗೆ ದೂರು ನೀಡಿದ್ದರು.
26 ಸಾವಿರ ಲಂಚದ ಹಣ ಪಡೆಯುತ್ತಿದ್ದ ವೇಳೆ ಎಸಿಬಿ ಪೊಲೀಸರು ದಾಳಿ ನಡೆಸಿ, ಡಾ.ಪುಟ್ಟಸ್ವಾಮಿಯನ್ನು ಬಂಧಿಸಿದ್ದರು. ವೈದ್ಯರ ವಿರುದ್ಧ ಕೋರ್ಟ್ ನಲ್ಲಿ ದೋಷಾರೋಪ ಪಟ್ಟಿಸಲ್ಲಿಕೆಯಾಗಿತ್ತು. ಪ್ರಕರಣದ ವಿಚಾರಣೆ ನಡೆಸಿದ ಲೋಕಾಯುಕ್ತ ಕೋರ್ಟ್, ವೈದ್ಯರ ವಿರುದ್ಧದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಡಾ.ಪುಟ್ಟಸ್ವಾಮಿಗೆ ನಾಲ್ಕು ವರ್ಷ ಜೈಲು ಹಾಗೂ 50 ಸಾವಿರ ದಂಡ ವಿಧಿಸಿ ತೀರ್ಪು ಪ್ರಕಟಿಸಿದೆ.