ಬೆಂಗಳೂರು: ಜನವರಿ 1 ರಿಂದ ಶಾಲೆ-ಕಾಲೇಜು ಪುನರಾರಂಭಿಸುವ ನಿರ್ಧಾರದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಸಿಎಂ ಯಡಿಯೂರಪ್ಪ ಹೇಳಿದ್ದಾರೆ. ಇದರೊಂದಿಗೆ ಜನವರಿ 1 ರಿಂದ ಶಾಲೆ ಆರಂಭ ಖಚಿತವಾಗಿದೆ.
ನಿಗದಿಯಂತೆಯೇ ಎಸ್ಎಸ್ಎಲ್ಸಿ ಮತ್ತು ದ್ವಿತೀಯ ಪಿಯುಸಿ ತರಗತಿಗಳು ರಾಜ್ಯಾದ್ಯಂತ ಜನವರಿ 1 ರಿಂದ ಆರಂಭವಾಗಲಿವೆ. 6 ರಿಂದ 9ನೇ ತರಗತಿಯವರೆಗೆ ವಿದ್ಯಾಗಮ ಯೋಜನೆಯಡಿ ಶಾಲೆ ಆವರಣದಲ್ಲಿ ತರಗತಿಗಳು ನಡೆಯಲಿವೆ. ಮಕ್ಕಳು ಸುರಕ್ಷಿತ ವ್ಯವಸ್ಥೆಗಳೊಂದಿಗೆ ಪಾಠ ಕೇಳಲು ಅವಕಾಶ ಕಲ್ಪಿಸಲಾಗಿದೆ ಎಂದು ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಹೇಳಿದ್ದಾರೆ.
ಜನವರಿ 15 ರವರೆಗೆ ಮಕ್ಕಳು, ಶಿಕ್ಷಕರು ಮತ್ತು ಇತರೆ ವಿಚಾರಗಳ ಬಗ್ಗೆ ಅಧ್ಯಯನ ನಡೆಸಿ 9 ಮತ್ತು 11 ನೇ ತರಗತಿಗಳನ್ನು ಆರಂಭಿಸುವ ಬಗ್ಗೆ ಚರ್ಚಿಸಲಾಗುವುದು. ಮಕ್ಕಳ ಭವಿಷ್ಯದ ಹಿತದೃಷ್ಠಿಯಿಂದ ಎಸ್ಎಸ್ಎಲ್ಸಿ, ದ್ವಿತಿಯ ಪಿಯುಸಿ ವಾರ್ಷಿಕ ಪರೀಕ್ಷೆಯನ್ನು ಜೂನ್ ನಲ್ಲಿ ನಡೆಸುವ ನಿರೀಕ್ಷೆ ಇದೆ ಎಂದು ಸಚಿವರು ಹೇಳಿದ್ದಾರೆ.