ಬೆಂಗಳೂರು: ಶಿಕ್ಷಕರಿಗೆ ಹಿಂಬಡ್ತಿ ನೀಡಿದ ಆದೇಶವನ್ನು ಪ್ರಶ್ನಿಸಿ ಹೈಕೋರ್ಟ್ ಗೆ ಮೇಲ್ಮನವಿ ಸಲ್ಲಿಸಲಾಗುವುದು. ಪ್ರಾಥಮಿಕ ಶಾಲೆಗಳಲ್ಲಿ ಒಂದರಿಂದ ಐದನೇ ತರಗತಿ ಪಾಠ ಮಾಡುವ ಶಿಕ್ಷಕರಿಗೆ ಪ್ರೌಢಶಾಲೆಗೆ ಪದೋನ್ನತಿ ನೀಡುವುದರ ವಿರುದ್ಧ ಕರ್ನಾಟಕ ಆಡಳಿತ ನ್ಯಾಯ ಮಂಡಳಿ ನೀಡಿದ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಲು ಶಿಕ್ಷಣ ಇಲಾಖೆ ಮುಂದಾಗಿದೆ.
ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಅವರು, ಇಲಾಖೆಯ ಪ್ರಧಾನ ಕಾರ್ಯದರ್ಶಿ ಮತ್ತು ಆಯುಕ್ತರಿಗೆ ಈ ಬಗ್ಗೆ ಸೂಚನೆ ನೀಡಿದ್ದಾರೆ. ಒಂದರಿಂದ ಐದನೇ ತರಗತಿಗೆ ಪಾಠ ಮಾಡುವ ಪ್ರಾಥಮಿಕ ಶಾಲೆ ಶಿಕ್ಷಕರಿಗೆ ಪ್ರೌಢಶಾಲೆಗೆ ಪದೋನ್ನತಿ ನೀಡಿದ್ದು, ಯಾವುದೇ ಶಿಕ್ಷಕರಿಗೆ ತೊಂದರೆಯಾಗದ ರೀತಿಯಲ್ಲಿ ಪೂರ್ವಭಾವಿ ಕ್ರಮಗಳನ್ನು ಚಾಲ್ತಿಯಲ್ಲಿ ಇಡಬೇಕು ಎಂದು ತಿಳಿಸಲಾಗಿದೆ.
ಶಿಕ್ಷಕರ ಹಿತಕಾಯುವ ಸಲುವಾಗಿ ವೃಂದ ಮತ್ತು ನೇಮಕಾತಿ ನಿಯಮಗಳಿಗೆ ತಿದ್ದುಪಡಿ ಪ್ರಕ್ರಿಯೆಗೆ ಸೂಕ್ತ ಕ್ರಮಕೈಗೊಳ್ಳಬೇಕೆಂದು ಹೇಳಲಾಗಿದೆ. ಸುಮಾರು 8,000 ಪ್ರಾಥಮಿಕ ಶಾಲೆ ಶಿಕ್ಷಕರು ಪ್ರೌಢಶಾಲೆ ಶಿಕ್ಷಕರಾಗಿ ಪದೋನ್ನತಿ ಪಡೆದಿದ್ದು, ಪದೋನ್ನತಿ ನೀಡುವುದರ ವಿರುದ್ಧ ಕೆಎಟಿ ತೀರ್ಪು ನೀಡಿದೆ. ಈ ಬಗ್ಗೆ ಮೇಲ್ಮನವಿ ಸಲ್ಲಿಸುವಂತೆ ಸೂಚಿಸಲಾಗಿದೆ.