ಬೆಂಗಳೂರು: ದೇಶಾದ್ಯಂತ ಕೊರೋನಾ ಪರಿಸ್ಥಿತಿ ಹಿನ್ನೆಲೆಯಲ್ಲಿ ಸಿಬಿಎಸ್ಇ, ಐಸಿಎಸ್ಇ 12 ನೇ ತರಗತಿ ಪರೀಕ್ಷೆಗಳನ್ನು ರದ್ದು ಮಾಡಲಾಗಿದೆ.
ಕೊರೋನಾ ಕಾರಣದಿಂದ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಈ ನಿರ್ಧಾರ ಕೈಗೊಳ್ಳಲಾಗಿದ್ದು, ರಾಜ್ಯದಲ್ಲಿಯೂ ದ್ವಿತೀಯ ಪಿಯುಸಿ ಪರೀಕ್ಷೆ ರದ್ದು ಮಾಡುವ ಸಾಧ್ಯತೆ ಇದೆ. ಎಸ್ಎಸ್ಎಲ್ಸಿ ಪರೀಕ್ಷೆಗೆ ಇನ್ನು ಸಮಯ ಇರುವುದರಿಂದ ನಂತರ ನಿರ್ಧಾರ ಮಾಡಲಾಗುವುದು ಎನ್ನಲಾಗಿದೆ.
ಕೊರೋನಾ ಮೂರನೇ ಅಲೆಯಲ್ಲಿ ಮಕ್ಕಳ ಮೇಲೆ ಹೆಚ್ಚು ಪರಿಣಾಮ ಬೀರುವ ಸಾಧ್ಯತೆಯಿದೆ ಎಂದು ತಜ್ಞರ ಸಮಿತಿ ಎಚ್ಚರಿಕೆ ನೀಡಿರುವುದರಿಂದ. ರಾಜ್ಯದಲ್ಲಿಯೂ ಎಸ್ಎಸ್ಎಲ್ಸಿ ಮತ್ತು ಪಿಯುಸಿ ಪರೀಕ್ಷೆ ರದ್ದು ಮಾಡುವ ಸಾಧ್ಯತೆ ಇದೆ. ಪರೀಕ್ಷೆ ನಡೆಸಿದರೆ ಎಡವಟ್ಟಾಗುವ ಸಾಧ್ಯತೆ ಇರುವುದರಿಂದ ಪರೀಕ್ಷೆ ನಡೆಸುವುದಾದರೆ ಮೊದಲು ಮಕ್ಕಳಿಗೆ ಎರಡು ಲಸಿಕೆ ನೀಡಬೇಕೆಂಬ ಸಲಹೆ ಕೂಡ ಕೇಳಿಬಂದಿದೆ. ಕೇಂದ್ರ ಸರ್ಕಾರವೇ ಪರೀಕ್ಷೆ ರದ್ದುಗೊಳಿಸಿರುವುದರಿಂದ ರಾಜ್ಯದಲ್ಲಿಯೂ ಪರೀಕ್ಷೆ ರದ್ದು ಮಾಡಬೇಕೆಂಬ ಒತ್ತಾಯ ಕೇಳಿಬಂದಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು, ಸಿಬಿಎಸ್ಇ ನಿರ್ಧಾರದ ಹಿನ್ನೆಲೆಯಲ್ಲಿ ಶೀಘ್ರದಲ್ಲಿ ಸೂಕ್ತ ತೀರ್ಮಾನ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.
ಸಿಬಿಎಸ್ಇ ಹನ್ನೆರಡನೇ ತರಗತಿಯ ಪರೀಕ್ಷೆಗಳನ್ನು ರದ್ದು ಮಾಡಿರುವುದಾಗಿ ಮಾಧ್ಯಮಗಳಲ್ಲಿ ವರದಿಯಾಗಿದ್ದು, ಈ ಕುರಿತಂತೆ ರಾಜ್ಯದ ಪರಿಸ್ಥಿತಿಯನ್ನು ಅವಲೋಕಿಸಿ ಶೀಘ್ರ ತೀರ್ಮಾನ ಪ್ರಕಟಿಸಲಾಗುತ್ತದೆ ಎಂದು ಹೇಳಿದ್ದಾರೆ. ಈ ಕುರಿತಂತೆ ಮಾಧ್ಯಮಗಳಿಗೆ ಹೇಳಿಕೆ ಬಿಡುಗಡೆ ಮಾಡಿರುವ ಸಚಿವರು, ಕೇಂದ್ರೀಯ ಮಂಡಳಿಯು ಪರೀಕ್ಷೆ ರದ್ದು ಮಾಡಿರುವ ಹಿನ್ನೆಲೆ, ರಾಜ್ಯ ಪಠ್ಯಕ್ರಮ ಅನುಸರಿಸಿ ಓದುತ್ತಿರುವ ವಿದ್ಯಾರ್ಥಿಗಳ ಶೈಕ್ಷಣಿಕ ಸ್ಥಿತಿಗತಿಗಳು, ಮೌಲ್ಯಮಾಪನದ ಅವಶ್ಯಕತೆ ಕುರಿತಂತೆ ಈಗಾಗಲೇ ರೂಪಿತವಾಗಿರುವ ಅಭಿಪ್ರಾಯಗಳ ವಿಸ್ತೃತ ಚರ್ಚೆ ನಡೆಸಿ ವಿದ್ಯಾರ್ಥಿಗಳ ಆರೋಗ್ಯ ಹಾಗೂ ಭವಿಷ್ಯದ ಹಿತದೃಷ್ಟಿಯಿಂದ ಶೀಘ್ರದಲ್ಲಿ ಸೂಕ್ತ ತೀರ್ಮಾನ ತೆಗೆದುಕೊಳ್ಳಲಾಗುತ್ತದೆ ಎಂದಿದ್ದಾರೆ.