ಮೈಸೂರು: ಸರ್ಕಾರಿ ಶಾಲೆ ಮಕ್ಕಳಿಗೆ ಉಚಿತವಾಗಿ ಸ್ಮಾರ್ಟ್ಫೋನ್ ನೀಡುವ ಕುರಿತು ಚಿಂತನೆ ನಡೆದಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ತಿಳಿಸಿದ್ದಾರೆ.
ಮೈಸೂರಿನಲ್ಲಿ ಡಿಡಿಪಿಐ ಕಚೇರಿಗೆ ಭೇಟಿ ನೀಡಿ ಸಭೆ ನಡೆಸಿದ ಅವರು ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು. ಕೊರೋನಾ ಕಾರಣದಿಂದಾಗಿ ಆನ್ಲೈನ್ ಕ್ಲಾಸ್ ಗಳು ನಡೆದಿವೆ. ಮುಂದಿನ ಶೈಕ್ಷಣಿಕ ವರ್ಷ ಹೇಗಿರುತ್ತದೆ ಎನ್ನುವುದನ್ನು ಹೇಳಲಾಗುವುದಿಲ್ಲ. ಹೀಗಾಗಿ ಸರ್ಕಾರಿ ಶಾಲೆಯ ಬಡ ಮಕ್ಕಳಿಗೆ ಅನುಕೂಲವಾಗುವಂತೆ ಉಚಿತವಾಗಿ ಸ್ಮಾರ್ಟ್ಫೋನ್ ಒದಗಿಸುವ ಚಿಂತನೆ ನಡೆದಿದೆ ಎಂದು ಮಾಹಿತಿ ನೀಡಿದ್ದಾರೆ.
ಎಲ್ಲ ಶೈಕ್ಷಣಿಕ ಜಿಲ್ಲೆಗಳ ವ್ಯಾಪ್ತಿಯಲ್ಲಿ ಬಡಮಕ್ಕಳಿಗೆ ಸ್ಮಾರ್ಟ್ಫೋನ್ ನೀಡುವ ಕುರಿತಂತೆ ಸರ್ವೆ ನಡೆಸಲಾಗಿದೆ. ಆನ್ಲೈನ್ ಕ್ಲಾಸ್ ನಿಂದ ಯಾವ ಮಕ್ಕಳು ವಂಚಿತರಾಗಬಾರದು. ಬಾಲ್ಯವಿವಾಹ, ಬಾಲಕಾರ್ಮಿಕರಾಗುವುದನ್ನು ತಡೆಯಲು ಆನ್ಲೈನ್ ಕ್ಲಾಸ್ ಅಗತ್ಯವಾಗಿದ್ದು, ಮಕ್ಕಳಿಗೆ ಸ್ಮಾರ್ಟ್ ಫೋನ್ ನೀಡಲು ಸಂಘ, ಸಂಸ್ಥೆಗಳ ನೆರವು ಪಡೆಯುವ ಚಿಂತನೆ ಇದೆ. ಈ ಬಗ್ಗೆ ವರದಿ ನೀಡಲು ತಿಳಿಸಲಾಗಿದೆ ಎಂದು ಹೇಳಿದ್ದಾರೆ.