ಬೆಂಗಳೂರು: ಸೋಮವಾರದಿಂದ ಆರರಿಂದ ಎಂಟನೇ ತರಗತಿಗಳನ್ನು ಪೂರ್ಣಪ್ರಮಾಣದಲ್ಲಿ ಆರಂಭಿಸಲಾಗುವುದು.
ಶಾಲೆ ಪುನಾರಂಭ ಕುರಿತಂತೆ ಇಂದು ಮಹತ್ವದ ಸಭೆ ನಡೆದಿದ್ದು, ಸಭೆಯಲ್ಲಿ 6 ರಿಂದ 8 ನೇ ತರಗತಿ ಆರಂಭಿಸಲು ತೀರ್ಮಾನಿಸಲಾಗಿದೆ. ವಿದ್ಯಾಗಮ ಬದಲಿಗೆ ಪೂರ್ಣಾವಧಿ ತರಗತಿಗಳನ್ನು ಫೆಬ್ರವರಿ 22 ರಿಂದ ಶುರುವಾಗಲಿದೆ.
ರಾಜ್ಯದಲ್ಲಿ 9. 10 ಮತ್ತು ಪ್ರಥಮ ಪಿಯುಸಿ ಹಾಗೂ ದ್ವಿತೀಯ ಪಿಯುಸಿ ತರಗತಿಗಳು ಪೂರ್ಣಪ್ರಮಾಣದಲ್ಲಿ ಆರಂಭವಾಗಿವೆ. ಆರರಿಂದ ಎಂಟನೇ ತರಗತಿಗಳನ್ನು ಕೂಡ ಪೂರ್ಣಪ್ರಮಾಣದಲ್ಲಿ ಆರಂಭಿಸಲು ಇಂದು ನಡೆದ ಶಿಕ್ಷಣ ಇಲಾಖೆ, ಆರೋಗ್ಯ ಇಲಾಖೆ ಮತ್ತು ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಸಭೆಯಲ್ಲಿ ತೀರ್ಮಾನಿಸಲಾಗಿದೆ.
ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಮಾತನಾಡಿ, ಕೋವಿಡ್ ನೆಗೆಟಿವ್ ಇದ್ದವರು ಶಾಲೆಗೆ ಬರಬಹುದು, ಪೋಷಕರು ಮಕ್ಕಳನ್ನು ಕಳಿಸಲು ಆತಂಕಪಡಬೇಕಿಲ್ಲ. ಶಾಲೆಗೆ ಬರುವುದು ಕಡ್ಡಾಯವಲ್ಲ. ಹಾಸ್ಟೆಲ್ ತೆರೆಯಲು, ಹೆಚ್ಚುವರಿ ಬಸ್ ಸೌಲಭ್ಯ ಕಲ್ಪಿಸಲು ತಿಳಿಸಲಾಗಿದೆ. ಬೆಂಗಳೂರು ನಗರ ಮತ್ತು ಕೇರಳ ಗಡಿ ಪ್ರದೇಶದಲ್ಲಿ 8 ನೇ ತರಗತಿಗಳನ್ನು ಮಾತ್ರ ಆರಂಭಿಸಲಾಗುವುದು ಎಂದು ತಿಳಿಸಿದ್ದಾರೆ.