
ಬೆಂಗಳೂರು: ಚನ್ನಪಟ್ಟಣ ಕ್ಷೇತ್ರದ ಉಪಚುನಾವಣೆಯಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ಸ್ಪರ್ಧೆ ಮಾಡುವ ವಿಚಾರವಾಗಿ ಪ್ರತಿಕ್ರಿಯಿಸಿರುವ ಮಾಜಿ ಸಚಿವ ಸುರೇಶ್ ಕುಮಾರ್, ಇದು ತುಘಲಕ್ ದರ್ಬಾರ್ ಎಂದು ಕಿಡಿಕಾರಿದ್ದಾರೆ.
ಇತಿಹಾಸದಲ್ಲಿ ಓರ್ವ ವ್ಯಕ್ತಿ ರಾಜಧಾನಿಯನ್ನು ಬದಲಾಯಿಸಿದ್ದ. ರಾಜಧಾನಿಯನ್ನು ದೆಹಲಿಯಿಂದ ದೌಲತಾಬಾದ್ ಗೆ ಬದಲಾಯಿಸಿದ್ದ. ನಂತರ ದೌಲತಾಬಾದ್ ನಿಂದ ದೆಹಲಿಗೆ ರಾಜಧಾನಿಯನ್ನು ವಾಪಾಸ್ ತಂದ. ಇತಿಹಾಸದಲ್ಲಿ ಈ ವಿಲಕ್ಷಣ ವ್ಯಕ್ತಿಯ ಹೆಸರು ಯಾವಾಗಲೂ ನೆನಪಿರುತ್ತದೆ. ಇದನ್ನೇ ತುಘಲಕ್ ದರ್ಬಾರ್ ಅನ್ನುವುದು ಎಂದು ವ್ಯಂಗ್ಯವಾಡಿದ್ದಾರೆ.
ಡಿ.ಕೆ.ಶಿವಕುಮಾರ್ ಕನಕಪುರದಿಂದ ಆಯ್ಕೆಯಾಗಿ 2028ರವರೆಗೆ ಶಾಸಕರಾಗಿ ಕರ್ತವ್ಯನಿರ್ವಹಿಸುವ ಅವಕಾಶವಿದೆ. ಚನ್ನಪಟ್ಟಣ ಉಪಚುನಾವಣೆಯಲ್ಲಿ ಸ್ಪರ್ಧಿಸಲು ಹೊರಟಿರುವುದು ಅನಗತ್ಯ ಪ್ರಹಸನ ಇದಕ್ಕೆ ಏನು ಹೇಳಬೇಕು? ಸಾರ್ವಜನಿಕರ ಹಣ, ರಾಷ್ಟ್ರದ ಸಂಪತ್ತು ಹೇಗೆ ವೈಯಕ್ತಿಕ ಪ್ರತಿಷ್ಠಿಗೆ ವೆಚ್ಚವಾಗುತ್ತದೆ ಎಂಬುದಕ್ಕೆ ಇದು ಸ್ಪಷ್ಟ ಉದಾಹರಣೆ. ಡಿ.ಕೆ.ಶಿವಕುಮಾರ್ ಅವರ ಈ ನಡೆ ವಿವೇಚನೆ ಮತ್ತು ವಿವೇಕದಿಂದ ಕೂಡಿದ ಅತಿರೇಕದ ನಡೆ. ರಾಹುಲ್ ಗಾಂಧಿಯವರು ಇದಕ್ಕೆ ಒಪ್ಪುತ್ತಾರಯೇ? ಎಂದು ಪ್ರಶ್ನಿಸಿದ್ದಾರೆ.