ಖಾಸಗಿ ಶಾಲೆಗಳಲ್ಲಿ ಈ ವರ್ಷ ಸರಿಯಾಗಿ ತರಗತಿಗಳು ನಡೆಯದ ಕಾರಣ ಶುಲ್ಕ ಕಡಿತ ಮಾಡುವಂತೆ ಪೋಷಕರು ಪ್ರತಿಭಟನೆ ನಡೆಸಿ ಶಿಕ್ಷಣ ಸಚಿವರ ಮೇಲೆ ಒತ್ತಡ ಹೇರಿದ್ದಾರೆ.
ಆದರೆ, ಇದಕ್ಕೆ ಅಗತ್ಯ ಕ್ರಮ ಕೈಗೊಳ್ಳಬೇಕಾದ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು, ಪೋಷಕರ ಮೇಲೆಯೇ ಗೂಬೆ ಕೂರಿಸಲು ಹೊರಟಿದ್ದಾರೆ ಎಂದು ಪೋಷಕರ ವಲಯದಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಅನೇಕ ಖಾಸಗಿ ಶಿಕ್ಷಣ ಸಂಸ್ಥೆಗಳು ಕಳೆದ ವರ್ಷದಂತೆಯೇ ಶುಲ್ಕವನ್ನು ವಸೂಲಿ ಮಾಡಲು ಮುಂದಾಗಿದ್ದು, ಇದಕ್ಕೆ ಕಡಿವಾಣ ಹಾಕಬೇಕು ಎಂಬುದು ಪೋಷಕರ ಒತ್ತಾಯವಾಗಿದೆ. ಆದರೆ, ಶಿಕ್ಷಣ ಸಚಿವರು ಶುಲ್ಕದ ವಿಚಾರದ ಬಗ್ಗೆ ಪೋಷಕರ ಮೇಲೆಯೇ ಗೂಬೆ ಕೂರಿಸಿದ್ದಾರೆ.
ಆರ್ಥಿಕವಾಗಿ ಶಕ್ತಿವಂತರಾಗಿ ಇದ್ದ ಕಾಲದಲ್ಲಿ ಕೆಲವು ಪೋಷಕರು ದುಬಾರಿ ಶಾಲೆಗಳಿಗೆ ಮಕ್ಕಳನ್ನು ಸೇರಿಸಿದ್ದಾರೆ. ದುಬಾರಿ ಶುಲ್ಕ ಪಡೆಯುವ ಶಾಲೆಗಳಿಗೆ ಮಕ್ಕಳನ್ನು ಸೇರಿಸಲು ರಾತ್ರಿ ಇಡೀ ಶಾಲೆಯ ಮುಂದೆ ನಿಂತು ಅರ್ಜಿಯನ್ನು ಪಡೆದಿದ್ದರು. ಗಣ್ಯರಿಂದ ಶಿಫಾರಸು ಪತ್ರಗಳನ್ನು ಪಡೆದು ದುಬಾರಿ ಶಾಲೆಗೆ ಸೇರಿಸಿದ್ದರು. ಅಂತಹ ಶಾಲೆಗಳಲ್ಲಿ ಮಕ್ಕಳಿಗೆ ಸೀಟು ಸಿಕ್ಕಾಗ ಸಂಭ್ರಮಿಸಿದ್ದರು. ಅದೇ ಶಾಲೆಯ ವಿರುದ್ಧ ಪದೇ ಪೋಷಕರು ಪ್ರತಿಭಟನೆ ಮಾಡುವ ಪರಿಸ್ಥಿತಿ ಬಂದಿದೆ. ಪೋಷಕರು ಇಂದು ಆರ್ಥಿಕವಾಗಿ ದುರ್ಬಲರಾಗಿದ್ದಾರೆ. ಆದರೆ, ಖಾಸಗಿ ಶಾಲೆಗಳ ಮುಖ್ಯಸ್ಥರು ತಮ್ಮ ಶಿಕ್ಷಕರಿಗೆ ಸಂಬಳ ಕೊಡಲು ಈಗ ಪೋಷಕರು ಶುಲ್ಕ ಕಟ್ಟಿಲ್ಲ ಎನ್ನುವ ಕಷ್ಟ ಹೇಳುತ್ತಿದ್ದಾರೆ ಎಂದು ಸುರೇಶ್ ಕುಮಾರ್ ಫೇಸ್ಬುಕ್ನಲ್ಲಿ ಸುದೀರ್ಘವಾಗಿ ಬರೆದು ಪೋಸ್ಟ್ ಮಾಡಿದ್ದಾರೆ.
ಇದಕ್ಕೆ ಪೋಷಕರ ವಲಯದಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಶುಲ್ಕವನ್ನು ಮನ್ನಾ ಮಾಡಿ ಎಂದು ಕೇಳುತ್ತಿಲ್ಲ. ಬದಲಿಗೆ ಈ ವರ್ಷ ಸರಿಯಾಗಿ ತರಗತಿಗಳು ನಡೆಯದ ಕಾರಣ ಕಡಿಮೆ ಶುಲ್ಕ ಪಡೆಯಲು ಸೂಚನೆ ನೀಡಬೇಕೆಂದು ತಿಳಿಸಿದ್ದಾರೆ. ನೀವು ಸರ್ಕಾರಿ ಶಾಲೆಗಳಿಗೆ ಮಾತ್ರ ಶಿಕ್ಷಣ ಸಚಿವರೇ? ಅಥವಾ ಖಾಸಗಿ ಶಾಲೆಗಳಿಗೆ ಶಿಕ್ಷಣ ಸಚಿವರು ಸೂಚನೆ ನೀಡಲು ಸಾಧ್ಯವಿಲ್ಲವೇ? ಎಂದು ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
https://www.facebook.com/nimmasuresh/posts/4113389412021706