ಬೆಂಗಳೂರು: ಮೊಬೈಲ್, ಟಿವಿ ಮತ್ತು ಇತರೆ ಎಲೆಕ್ಟ್ರಾನಿಕ್ ಗ್ಯಾಜೆಟ್ ಗಳ ಕೊರತೆಯಿಂದಾಗಿ ಆನ್ಲೈನ್ ಶಿಕ್ಷಣದಿಂದ ವಂಚಿತರಾದ ಗ್ರಾಮೀಣ ಮಕ್ಕಳಿಗೆ ಅನುಕೂಲವಾಗುವಂತೆ ಗ್ರಾಮ ಪಂಚಾಯಿತಿ ಗ್ರಂಥಾಲಯಗಳಲ್ಲಿ ಡಿಜಿಟಲ್ ಸ್ಕೂಲ್ ವ್ಯವಸ್ಥೆ ಮಾಡಲಾಗುತ್ತದೆ.
ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಕುರಿತು ಮಾಹಿತಿ ನೀಡಿದ್ದಾರೆ. ಮೊಬೈಲ್, ಟಿವಿ ಇಲ್ಲದ ಆನ್ಲೈನ್ ಶಿಕ್ಷಣದಿಂದ ವಂಚಿತರಾದ ಗ್ರಾಮೀಣ ಪ್ರದೇಶದ ಮಕ್ಕಳಿಗೆ ಗ್ರಾಮ ಪಂಚಾಯಿತಿ ಗ್ರಂಥಾಲಯಗಳಲ್ಲಿ, ಡಿವೈಸರ್ ಗಳನ್ನು ಅಳವಡಿಸಿ ಶೈಕ್ಷಣಿಕ ಚಟುವಟಿಕೆಗಳಿಗೆ ವ್ಯವಸ್ಥೆ ಮಾಡಲಾಗುವುದು ಎಂದು ಸಚಿವರು ಮಾಹಿತಿ ನೀಡಿದ್ದಾರೆ.
ಮುಖ್ಯಮಂತ್ರಿಗಳ ಸಲಹೆಗಾರ ಪ್ರಶಾಂತ್ ಪ್ರಕಾಶ್ ಮತ್ತು ಸರ್ಕಾರದ ಶೈಕ್ಷಣಿಕ ಸಲಹೆಗಾರ ಪ್ರೊ. ಎಂ.ಆರ್. ದೊರೆಸ್ವಾಮಿ ಅವರೊಂದಿಗೆ ಸಚಿವ ಸುರೇಶ್ ಕುಮಾರ್ ಸಮಾಲೋಚನೆ ನಡೆಸಿದ್ದಾರೆ.
ರಾಜ್ಯದ 5766 ಗ್ರಾಮಪಂಚಾಯಿತಿ ಗ್ರಂಥಾಲಯಗಳಲ್ಲಿ ಡಿವೈಸರ್ ಅಳವಡಿಸಿ ಟಿವಿ ಮತ್ತು ಮೊಬೈಲ್ ಇಲ್ಲದ ಮಕ್ಕಳಿಗೆ ಆನ್ಲೈನ್ ಶಿಕ್ಷಣ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ ಯೋಜನೆ ಜಾರಿಗೊಳಿಸಲಾಗುವುದು. ಗ್ರಾಮೀಣ ಮಕ್ಕಳ ಶಿಕ್ಷಣ ಮುಂದುವರಿಕೆಗೆ ಅನುಕೂಲವಾಗುವಂತಹ ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗುವುದು. ಗ್ರಾಮೀಣ ಪ್ರದೇಶದಲ್ಲಿ ನೆಟ್ವರ್ಕ್ ಸಮಸ್ಯೆ ಪರಿಹರಿಸುವಂತೆ ಮೊಬೈಲ್ ಕಂಪನಿಗಳೊಂದಿಗೆ ಸರ್ಕಾರ ಚರ್ಚೆ ನಡೆಸಿದೆ ಎಂದು ಹೇಳಲಾಗಿದೆ.