
ಬೆಂಗಳೂರು: ಬರುವ ಶೈಕ್ಷಣಿಕ ವರ್ಷದಲ್ಲಿ ಕಲಿಕಾ ನಿರಂತರತೆಗೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ವರದಿ ನೀಡಲು ಸಾಶಿಇ ಆಯುಕ್ತರ ನೇತೃತ್ವದಲ್ಲಿ ಶಿಕ್ಷಣ ತಜ್ಞರು, ಅಧಿಕಾರಿಗಳು, ಪೋಷಕರು, ಖಾಸಗಿ ವಿದ್ಯಾಸಂಸ್ಥೆಗಳ ಪ್ರತಿನಿಧಿಗಳನ್ನೊಳಗೊಂಡ ಕಾರ್ಯಪಡೆ ರಚಿಸಲಾಗಿದ್ದು, ಶಿಕ್ಷಣದ ಮುಂದುವರಿಕೆ ಕುರಿತಂತೆ ಕ್ರಿಯಾಯೋಜನೆಯನ್ನು ರೂಪಿಸಲಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಅಭಿಪ್ರಾಯಪಟ್ಟಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶೇ. 98 ರಷ್ಟು ಸಿಬ್ಬಂದಿ ವ್ಯಾಕ್ಸಿನೇಷನ್ ಆಗಿದೆ. ಪರೀಕ್ಷಾ ಪ್ರಕ್ರಿಯೆಯಲ್ಲಿ ಭಾಗಿಯಾಗುವ 1,33,926 ಸಿಬ್ಬಂದಿಗಳಲ್ಲಿ 1,30,522 ಮಂದಿ ಮೊದಲ ಡೋಸ್ ಪಡೆದಿದ್ದಾರೆ. 48,938 ಮಂದಿ ಎರಡನೇ ಡೋಸ್ ಪಡೆದಿದ್ದಾರೆ. ಶೇ. 98 ರಷ್ಟು ಮಂದಿ ಲಸಿಕೆ ಪಡೆದಿದ್ದಾರೆ. 3404 ಮಂದಿ ಇನ್ನೆರೆಡು ದಿನಗಳಲ್ಲಿ ಲಸಿಕೆ ಪಡೆಯಲಿದ್ದಾರೆಂದು ತಿಳಿಸಿದರು.
ಪರೀಕ್ಷೆ ನಡೆಸಲು ಯಾವುದೇ ರಹಸ್ಯ ಕಾರ್ಯಸೂಚಿ ಇಲ್ಲ:
ಪರೀಕ್ಷೆ ನಡೆಸುವುದು ಸರ್ಕಾರಕ್ಕೆ ಪ್ರತಿಷ್ಠೆ ಇಲ್ಲವೇ ಹಠದ ವಿಷಯವಲ್ಲ. ಪರೀಕ್ಷೆ ಕೈಬಿಡುವುದು ಯಾರಿಗೇ ಆಗಲಿ ಸುಲಭದ ಸಂಗತಿ. ಆದರೆ ನಾವು ನಮ್ಮ ಮಕ್ಕಳ ಭವಿಷ್ಯ ಮತ್ತು ಹಿತದೃಷ್ಟಿಯಿಂದ ಅವರ ಮುಂದಿನ ಶಿಕ್ಷಣ ಅಯ್ಕೆಯ ಅನುಕೂಲಕ್ಕಾಗಿ ಪರೀಕ್ಷೆ ನಡೆಸುತ್ತಿದ್ದೇವೆ ಎಂದು ಸಚಿವರು ಪುನರುಚ್ಛರಿಸಿದರು. ಪರೀಕ್ಷೆ ನಡೆಸುವುದರಲ್ಲಿ ಶಿಕ್ಷಣ ಇಲಾಖೆಯ ಯಾವುದೇ ರಹಸ್ಯ ಕಾರ್ಯಸೂಚಿಯೇನಿಲ್ಲ ಎಂದೂ ಅವರು ಸ್ಪಷ್ಟಪಡಿಸಿದರು.
ರಾಜ್ಯದ ಆರೋಗ್ಯ ಇಲಾಖೆ ಮತ್ತು ರಾಜ್ಯದ ಕೋವಿಡ್ ತಾಂತ್ರಿಕ ಸಲಹಾ ಸಮಿತಿ ನೀಡಿದ ನಿರ್ದೇಶನದ ಆಧಾರದಲ್ಲೇ ಅವರು ರೂಪಿಸಿದ ಎಸ್ಒಪಿಯನ್ವಯವೇ ಪರೀಕ್ಷೆ ನಡಯುತ್ತಿದೆ. ಅದಕ್ಕೆ ರಾಜ್ಯದ ಮುಖ್ಯಮಂತ್ರಿಯವರೂ ಅನುಮೋದನೆ ನೀಡಿದ್ದಾರೆ ಎಂದು ತಿಳಿಸಿದರು.
ಜುಲೈ ಕೊನೇ ವಾರದಲ್ಲಿ ಪಿಯುಸಿ ಫಲಿತಾಂಶ:
ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶಗಳನ್ನು ಜುಲೈ 20 ರ ಆಸುಪಾಸಿನಲ್ಲಿ ಪ್ರಕಟಿಸಲಾಗುವುದು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ತಿಳಿಸಿದರು.