ಬೆಂಗಳೂರು: ಸಕಾಲ ಸೇವೆಗಳನ್ನು ಮತ್ತಷ್ಟು ಪರಿಣಾಮಕಾರಿಯಾಗಿಸಲು ರಾಜ್ಯ ಸರ್ಕಾರ ಸಕಾಲ ಸೇವಾ ಆಯೋಗ ರಚಿಸಲು ಚಿಂತನೆ ನಡೆಸಿದೆ.
ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಹಾಗೂ ಸಕಾಲ ಮಿಷನ್ ಸಚಿವ ಎಸ್. ಸುರೇಶ್ ಕುಮಾರ್ ಈ ಕುರಿತು ಮಾತನಾಡಿ, ಸಕಾಲ ಸೇವೆಗಳನ್ನು ಮತ್ತಷ್ಟು ಪರಿಣಾಮಕಾರಿಯಾಗಿಸುವ ಉದ್ದೇಶದಿಂದ ಹಾಗೂ ಉತ್ತರದಾಯಿತ್ವದ ವ್ಯವಸ್ಥೆ ರೂಪಿಸಲು ರಾಜ್ಯದಲ್ಲಿ ಸಕಾಲ ಸೇವಾ ಆಯೋಗ ರಚಿಸಲು ಚಿಂತನೆ ನಡೆದಿದೆ ಎಂದು ತಿಳಿಸಿದ್ದಾರೆ.
ಸಕಾಲ, ಗ್ರಾಮ ಒನ್, ಜನಸೇವಕ ಯೋಜನೆಗಳ ಪ್ರಗತಿ ಪರಿಶೀಲನೆ ನಡೆಸಿದ ಸಚಿವರು, ಗ್ರಾಮಗಳ ಮಟ್ಟದಿಂದಲೂ ಸಕಾಲ ಸೇವೆಗಳನ್ನು ಜನಪ್ರಿಯಗೊಳಿಸಲು ಜಾಗೃತಿ ಮೂಡಿಸುವುದು ಸೇರಿದಂತೆ ಹಲವು ಕಾರ್ಯಕ್ರಮ ರೂಪಿಸಲಾಗುತ್ತದೆ ಎಂದು ತಿಳಿಸಿದ್ದಾರೆ.
ಕೊರೋನಾ ಹಿನ್ನಲೆಯಲ್ಲಿ ಸ್ಥಗಿತಗೊಂಡಿರುವ ಮನೆಬಾಗಿಲಿಗೆ ಸೇವೆ ನೀಡುವ ಜನಸೇವಕ ಯೋಜನೆಯನ್ನು ಪುನಾರಂಭ ಮಾಡಲಾಗುವುದು. ಗ್ರಾಮ ಒನ್ ಸೇವೆಗಳನ್ನು ರಾಜ್ಯದಲ್ಲೆಡೆ ವಿಸ್ತರಿಸಲು ಕ್ರಿಯಾಯೋಜನೆ ರೂಪಿಸಲು ಸೂಚನೆ ನೀಡಲಾಗಿದೆ ಎಂದು ಹೇಳಲಾಗಿದೆ.