ಪ್ರವಾಹ ಪರಿಸ್ಥಿತಿಯನ್ನು ವೀಕ್ಷಿಸಲು ತೆರಳಿದ್ದ ಗುಜರಾತಿನ ಸೂರತ್ ನಗರದ ಉಪ ಮೇಯರ್ ನರೇಂದ್ರ ಪಟೇಲ್, ಅಧಿಕಾರಿಯೊಬ್ಬರ ಹೆಗಲ ಮೇಲೆ ಏರಿದ್ದು, ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಫುಲ್ ವೈರಲ್ ಆಗಿದೆ. ಈ ವಿಡಿಯೋ ನೋಡಿದ ನೆಟ್ಟಿಗರು ಉಪ ಮೇಯರ್ ವರ್ತನೆಗೆ ಕಟು ಟೀಕೆ ಮಾಡುತ್ತಿದ್ದಾರೆ.
ಸೂರತ್ ನಲ್ಲಿ ಇತ್ತೀಚೆಗೆ ವ್ಯಾಪಕ ಮಳೆ ಸುರಿದಿದ್ದು, ಇದರ ಪರಿಣಾಮ ಪ್ರವಾಹ ಪರಿಸ್ಥಿತಿ ಉಂಟಾಗಿತ್ತು. ಅಲ್ಲದೆ ಯುವಕನೊಬ್ಬ ಪ್ರವಾಹದಲ್ಲಿ ಕೊಚ್ಚಿ ಹೋಗಿದ್ದು ನಾಲ್ಕೈದು ದಿನಗಳ ಕಾಲವಾದರೂ ಆತನ ಮೃತ ದೇಹ ಸಿಕ್ಕಿರಲಿಲ್ಲ. ಅಗ್ನಿಶಾಮಕ ಪಡೆ ಸೇರಿದಂತೆ ಸ್ಥಳೀಯರು ಯುವಕನನ್ನು ಪತ್ತೆಹಚ್ಚಲು ತೀವ್ರ ಕಾರ್ಯಾಚರಣೆ ನಡೆಸಿದ್ದರು.
ಈ ಕಾರ್ಯಾಚರಣೆಯನ್ನು ವೀಕ್ಷಿಸಲು ಉಪ ಮೇಯರ್ ನರೇಂದ್ರ ಪಟೇಲ್ ಸ್ಥಳಕ್ಕೆ ಆಗಮಿಸಿದ್ದು, ಈ ಸಂದರ್ಭದಲ್ಲಿ ಕೆಸರಿನಿಂದ ಕೂಡಿದ್ದ ರಸ್ತೆ ದಾಟಲು ಅಗ್ನಿಶಾಮಕ ಅಧಿಕಾರಿ ಸುನಿಲ್ ಚೌಧರಿ ಹೆಗಲ ಮೇಲೆ ಏರಿದ್ದಾರೆ. ಈ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗಿದೆ.
ಉಪ ಮೇಯರ್ ನರೇಂದ್ರ ಪಟೇಲ್ ವರ್ತನೆಗೆ ಸೋಶಿಯಲ್ ಮೀಡಿಯಾದಲ್ಲಿ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದ್ದಂತೆ ಪ್ರತಿಕ್ರಿಯೆ ನೀಡಿರುವ ಅಗ್ನಿಶಾಮಕ ಅಧಿಕಾರಿ ಸುನಿಲ್ ಚೌಧರಿ, ಉಪಮೇಯರ್ ಅವರಿಗೆ ಕಾಲು ನೋವು ಕಾಣಿಸಿಕೊಂಡಿದ್ದು, ಹೀಗಾಗಿ ನಾಲ್ಕೈದು ಹೆಜ್ಜೆ ದಾಟಲು ನಾನು ಸಹಕರಿಸಿದ್ದೇನೆ. ಯಾವುದೇ ನಾಗರೀಕರು ಸಂಕಷ್ಟದಲ್ಲಿದ್ದಾಗ ಅವರ ನೆರವಿಗೆ ಧಾವಿಸುವುದು ಅಗ್ನಿಶಾಮಕ ದಳದ ಕರ್ತವ್ಯ ಎಂದು ಹೇಳಿದ್ದಾರೆ.