
ಕೋವಿಡ್-19 ಸಾಂಕ್ರಮಿಕದಿಂದ ಗಣೇಶ ಮೂರ್ತಿಗಳನ್ನು ಮಾಡದೇ ಎರಡು ವರ್ಷಗಳಾಗಿರುವ ಕಲಾವಿದರಿಗೆ ಈ ವರ್ಷ ಮತ್ತೆ ಭರಪೂರ ಕೆಲಸ ಸಿಕ್ಕಿದೆ. ರಾಮ ಮಂದಿರದ ಪ್ರತಿಕೃತಿಯನ್ನು ಸೂರತ್‌ನ ಅಡಾಜನ್ ಪ್ರದೇಶದ ಗಣೇಶ ಪೆಂಡಾಲ್ ಒಂದರಲ್ಲಿ ಇಡಲಾಗುವುದು. ಸೆಪ್ಟೆಂಬರ್ 10ರಿಂದ ಗಣೇಶ ಹಬ್ಬ ಆರಂಭವಾಗಲಿದೆ.
ಪ್ರತಿ ವರ್ಷವೂ ಗಣೇಶ ಚತುರ್ಥಿಯನ್ನು ಅದ್ಧೂರಿಯಾಗಿ ಆಚರಿಸುವ ಅಡಾಜನ್ ಪ್ರದೇಶದ ಗಾರ್ಡನ್ ಸಮೂಹ ಬೇರೆ ಬೇರೆ ಥೀಂಗಳಲ್ಲಿ ಪೆಂಡಾಲ್ ಅನ್ನು ಅಲಂಕರಿಸುತ್ತದೆ. 2021ರ ಗಣೇಶೋತ್ಸವಕ್ಕೆ ರಾಮ ಮಂದಿರವನ್ನೇ ಥೀಂ ಮಾಡಿಕೊಳ್ಳಲು ಗಾರ್ಡನ್ ಸಮೂಹದ ಅಧ್ಯಕ್ಷ ಹರ್ಷ್ ಮೆಹ್ತಾ ನಿರ್ಧರಿಸಿದ್ದಾರೆ.
BIG NEWS: ಗಣೇಶೋತ್ಸವ ಆಚರಣೆಗೆ ಷರತ್ತುಬದ್ಧ ಅನುಮತಿ ಸಾಧ್ಯತೆ
ಅಯೋಧ್ಯೆ ರಾಮ ಮಂದಿರದ ರೂಪುರೇಷೆಗಳ ವಿಡಿಯೋಗಳು ಹಾಗೂ ಫೋಟೋಗಳನ್ನು ಸಂಗ್ರಹಿಸಿದ ಸಮೂಹ ಇಲ್ಲಿನ ಬೇಗಂಪುರ ಪ್ರದೇಶದಲ್ಲಿರುವ ಕಲಾವಿದರನ್ನು ಭೇಟಿ ಮಾಡಿ ತಮ್ಮ ಐಡಿಯಾ ಮುಂದಿಟ್ಟಿದ್ದಾರೆ.
ಕಲಾವಿದ ಅನ್ಸಾರಿ ನೇತೃತ್ವದಲ್ಲಿ ಎಂಟು ಮಂದಿ ಮುಸ್ಲಿಂ ಕಲಾವಿದರು 10 ರಾತ್ರಿಗಳ ಕಾಲ ಕೆಲಸ ಮಾಡಿ ಈ ಸುಂದರವಾದ ಮಂದಿರದ ಪ್ರತಿಕೃತಿ ರಚಿಸಿದ್ದಾರೆ. ವೃತ್ತಿಯಲ್ಲಿ ತರಕಾರಿ ಮಾರಾಟ, ಆಟೋರಿಕ್ಷಾ ಚಾಲನೆ ಮಾಡುವ ಈ ಕಲಾಕಾರರು ಬೆಳಿಗ್ಗೆಯೆಲ್ಲಾ ದೈನಂದಿನ ವೃತ್ತಿ ಮಾಡಿಕೊಂಡು ಸಂಜೆ 7ರಿಂದ ಬೆಳಿಗ್ಗೆ 6ಗಂಟೆವರೆಗೂ ಗಣೇಶ ಮೂರ್ತಿ ನಿರ್ಮಾಣದ ಕೆಲಸದಲ್ಲಿ ನಿರತರಾಗಿದ್ದಾಗಿ ಅನ್ಸಾರಿ ತಿಳಿಸಿದ್ದಾರೆ.
ಅಯೋಧ್ಯೆಯಲ್ಲಿ ನಿರ್ಮಿಸಲು ಉದ್ದೇಶಿಸಲಾದ ರಾಮ ಮಂದಿರದಂತೆಯೇ ಈ ಪ್ರತಿಕೃತಿಯಲ್ಲೂ 174 ಸ್ತಂಭಗಳಿದ್ದು, ನಾಲ್ಕು ಗೋಪುರಗಳಿವೆ. 15 ಅಡಿ ಉದ್ದವಿರುವ ಈ ಥರ್ಮಾಕೋಲ್ ಪ್ರತಿಕೃತಿ, 14 ಅಡಿ ಅಗಲ ಹಾಗೂ 14 ಅಡಿ ಎತ್ತರವಿದೆ. ಶ್ರೀ ರಾಮಚಂದ್ರರ ವೇಷಧಾರಿಯಾಗಿರುವ ಎರಡು ಅಡಿ ಎತ್ತರದ ಗಣೇಶನ ಮೂರ್ತಿಯನ್ನು ಈ ದೇವಸ್ಥಾನದ ಪ್ರತಿಕೃತಿಯೊಳಗೆ ಇಡಲಾಗುವುದು.