ಪೋಷಕರು ಮನೆಯಲ್ಲಿ ಇಲ್ಲದಿದ್ದಾಗ 8 ತಿಂಗಳ ಗಂಡು ಮಗುವಿನ ಮೇಲೆ ಅದರ ಆರೈಕೆ ಮಾಡುವ ದಾದಿಯೇ ಹಲ್ಲೆ ನಡೆಸಿದ್ದಾರೆಂದು ಆರೋಪಿಸಲಾಗಿದೆ. ಈ ಘಟನೆ ಗುಜರಾತ್ ರಾಜ್ಯದ ಸೂರತ್ ನ ರಾಂದರ್ ಪ್ರದೇಶದಲ್ಲಿ ನಡೆದಿದೆ. ಪುಟ್ಟ ಮಗುವನ್ನು ಜೋರಾಗಿ ಹಾಸಿಗೆಯ ಮೇಲೆ ಎಸೆದಿರುವುದರಿಂದ, ಆತನ ಸ್ಥಿತಿ ಗಂಭೀರವಾಗಿದ್ದು, ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿಯಾಗಿದೆ.
ಶಾಲೆಯೊಂದರ ಕ್ರೀಡಾ ಶಿಕ್ಷಕರಾಗಿರುವ ಮಗುವಿನ ತಂದೆ ಮಿತೇಶ್ ಪಟೇಲ್, ಮಗುವನ್ನು ನೋಡಿಕೊಳ್ಳುತ್ತಿದ್ದ ಕೇರ್ ಟೇಕರ್ ಕೋಮಲ್ ತಾಂಡೇಲ್ಕರ್ (27) ವಿರುದ್ಧ ದೂರು ನೀಡಿದ್ದಾರೆ. ಕೊಲೆ ಯತ್ನದ ಅಡಿಯಲ್ಲಿ ರಾಂದರ್ ಪೊಲೀಸರು ಕೋಮಲ್ ವಿರುದ್ಧ, ಎಫ್ಐಆರ್ ದಾಖಲಿಸಿದ್ದಾರೆ.
ಲೈಕ್ಸ್‌ಗಾಗಿ ಕಾಡಾನೆಗೆ ಕಿರುಕುಳ ನೀಡಿದ ಟಿಕ್ ಟಾಕರ್..!
ಐಟಿಐನಲ್ಲಿ ಅಧ್ಯಾಪಕರಾಗಿರುವ ಪಟೇಲ್ ಮತ್ತು ಅವರ ಪತ್ನಿ ಪ್ರತಿದಿನ ಕೆಲಸಕ್ಕೆ ಹೋಗುತ್ತಿದ್ದರು. ಹೀಗಾಗಿ ಎಂಟು ತಿಂಗಳ ತಮ್ಮ ಅವಳಿ ಮಕ್ಕಳನ್ನು ನೋಡಿಕೊಳ್ಳಲು ಕೋಮಲ್ ಅವರನ್ನು ನೇಮಿಸಿಕೊಂಡಿದ್ದರು. ಆದ್ರೆ ಆಕೆಯ ಮೇಲೆ ಕಣ್ಣಿಡಲು, ಕೋಮಲ್ ಗೆ ತಿಳಿಸದೆಯೆ ಪಟೇಲ್ ಮನೆಯಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿದ್ದರು. ಅವರ ನೆರೆಹೊರೆಯವರು ಕೂಡ ಪಟೇಲ್ ದಂಪತಿಗೆ, ಮಕ್ಕಳು ಕೋಮಲ್ ಜೊತೆ ಇರುವಾಗ ತುಂಬಾ ಅಳುತ್ತಾರೆ ಎಂದು ತಿಳಿಸಿದ್ದರು.
ಶುಕ್ರವಾರ ಕೋಮಲ್ ಅವರು ಪಟೇಲ್ ಅವರಿಗೆ ಕರೆ ಮಾಡಿ, ಒಬ್ಬ ಹುಡುಗ ಪ್ರಜ್ಞಾಹೀನನಾಗಿದ್ದಾನೆ ಎಂದು ತಿಳಿಸಿದ್ದಾರೆ. ತಕ್ಷಣವೇ ಧಾವಿಸಿದ ಪೋಷಕರು ಮಗುವನ್ನ ಆಸ್ಪತ್ರೆಗೆ ದಾಖಲಿಸಿದ್ದರು. ಏನು ಅರಿಯದ ಪುಟ್ಟ ಹುಡುಗನ ಮೆದುಳಿಗೆ ಗಾಯವಾಗಿದ್ದು, ವೆಂಟಿಲೇಟರ್‌ನಲ್ಲಿದ್ದಾನೆ. ಕೋಮಲ್ ಬಾಲಕನನ್ನು ಹಾಸಿಗೆಯ ಮೇಲೆ ಎಸೆದಿದ್ದರಿಂದ ತಲೆಗೆ ಗಂಭೀರ ಗಾಯವಾಗಿದೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.