ಚಾಮರಾಜನಗರ : ನಿರ್ಮಾಪಕ ಕುಮಾರ್,ರೆಹಮಾನ್ ನಟ ಕಿಚ್ಚ ಸುದೀಪ್ ವಿರುದ್ಧ ವಂಚನೆ ಆರೋಪ ಮಾಡಿದ್ದು, ಸ್ಯಾಂಡಲ್ ವುಡ್ ನಲ್ಲಿ ಈ ಬಗ್ಗೆ ಭಾರಿ ಚರ್ಚೆಗಳಾಗುತ್ತಿದೆ. ಸುದೀಪ್ ವಿರುದ್ಧ ಮಾಡಿರುವ ಆರೋಪಕ್ಕೆ ಸಂಬಂಧಿಸಿದಂತೆ ನಿರ್ಮಾಪಕ ಕುಮಾರ್, ರೆಹಮಾನ್ ವಿರುದ್ಧ ಸುದೀಪ್ ಅಭಿಮಾನಿಗಳು ರೊಚ್ಚಿಗೆದ್ದಿದ್ದು, ಕುಮಾರ್ ಭಾವಚಿತ್ರಕ್ಕೆ ಚಪ್ಪಲಿಯಲ್ಲಿ ಹೊಡೆದು ಪ್ರತಿಭಟನೆ ನಡೆಸಿದ್ದಾರೆ.
ಈ ಬೆನ್ನಲ್ಲೇ ವಿಷ್ಣುಸೇನಾ ಅಧ್ಯಕ್ಷ ವೀರಕಪುತ್ರ ಶ್ರೀನಿವಾಸ್ ಹೊಸ ಬಾಂಬ್ ಸಿಡಿಸಿದ್ದು, ಭಾರಿ ಚರ್ಚೆಗೆ ಕಾರಣವಾಗಿದೆ. ಈ ಬಗ್ಗೆ ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿರುವ ವೀರಕಪುತ್ರ ಶ್ರೀನಿವಾಸ್ ಕಿಚ್ಚ ಸುದೀಪ್ ವಿರುದ್ಧ ನಿರ್ಮಾಪಕರು ಸಿಡಿದೇಳಲು ‘ಸೂರಪ್ಪ ಬಾಬು’ ಕಾರಣ ಎಂದು ಹೊಸ ಬಾಂಬ್ ಸಿಡಿಸಿದ್ದಾರೆ.
ವೀರಕಪುತ್ರ ಶ್ರೀನಿವಾಸ್ ಹೇಳಿದ್ದೆನು..?
ಇತ್ತೀಚೆಗೆ ಕಿಚ್ಚ ಸುದೀಪ್ ಅವ್ರ ಕುರಿತಾಗಿ ತುಂಬಾ ಮಾತುಗಳು ಕೇಳಿಬರ್ತಿವೆ. ಅವ್ರು ನಿರ್ಮಾಪಕರಿಗೆ ಹಣ ಕೊಡ್ಬೇಕಂತೆ, ಕಾಲ್ ಶೀಟ್ ಕೊಡಬೇಕಂತೆ, ಆದ್ರೆ ಸಾಕ್ಷಿಗಳಿಲ್ಲವಂತೆ… ಅದಂತೆ, ಇದಂತೆ… ಅನ್ನೋ ಅಂತೆ ಕಂತೆಗಳು ತುಂಬಾನೇ ಹರಿದಾಡ್ತಿವೆ.
ಈ ಪ್ರಕರಣದ ಬೆಳವಣಿಗೆಗಳನ್ನು ಒಂದು ವಾರದಿಂದ ಗಮನಿಸುತ್ತಿದ್ದೇನೆ. ಇದೊಂದು ಹಣದ ವಿಷಯವಾಗಿ ಮಾತ್ರ ಉಳಿದಿದೆ ಅಂತ ನನಗನ್ನಿಸುತ್ತಿಲ್ಲ. ಈ ಪ್ರಕರಣ ಮಾನಹರಣಕ್ಕೆ ಮಾತ್ರ ಮೀಸಲಾಗಿರುವುದು ಸ್ಪಷ್ಟವಾಗಿದೆ.
ಕನ್ನಡ ಚಿತ್ರರಂಗಕ್ಕೆ ರಾಷ್ಟ್ರಮಟ್ಟದಲ್ಲಿ ಖ್ಯಾತಿಯನ್ನು ತಂದು ಕೊಟ್ಟ ಖ್ಯಾತನಟನ ವಿರುದ್ದವಾಗಿ ಇಷ್ಟೆಲ್ಲಾ ನಡೆಯುತ್ತಿರುವುದು ನಿಜಕ್ಕೂ ಒಳ್ಳೆಯ ಬೆಳವಣಿಗೆಯಲ್ಲ. ಹಾಗಂತ ಸುದೀಪ್ ಅವ್ರು ಪ್ರಶ್ನಾತೀತರಲ್ಲ. ತಪ್ಪು ಮಾಡಿದಾಗ ಅವರನ್ನೂ ಪ್ರಶ್ನಿಸಬೇಕು. ಆದ್ರೆ ಪ್ರಶ್ನಿಸುತ್ತಿರುವವರ ಅಸಲೀಯತ್ತು, ಪ್ರಮಾಣಿಕತೆಯನ್ನು ಓರೆಗೆ ಹಚ್ಚಬೇಕಿದೆ. ಅಂತಹ ಕೆಲವು ಸಂಗತಿಗಳನ್ನು ನಾನು ನಿಮ್ಮೊಂದಿಗೆ ಹಂಚಿಕೊಳ್ಳಬೇಕಿದೆ. ನಾನ್ಯಾಕೆ ಹಂಚಿಕೊಳ್ಳಬೇಕು ಅಂದ್ರೆ ಸುದೀಪ್ ಸರ್ ಅವ್ರ ಜೊತೆ ಮಾತ್ರವಲ್ಲ ಈ ಆರೋಪಗಳನ್ನು ಮಾಡುತ್ತಿರುವ ಇಬ್ಬರು ನಿರ್ಮಾಪಕರ ಜೊತೆಗೂ ನನಗೆ ಅಷ್ಟೇ ಒಡನಾಟವಿರುವುದರಿಂದ ಈ ಮಾತುಗಳನ್ನು ನಾನು ಹೇಳಲೇಬೇಕು..
ಸುದೀಪ್ ಅವ್ರ ಬಗ್ಗೆ ಕುಮಾರ್ ಅವ್ರು ಆರೋಪ ಮಾಡಿದ್ರು. ಸುದೀಪ್ ನನಗೆ ಒಂಭತ್ತು ಕೋಟಿ ಹಣ ಕೊಡಬೇಕು ಅಂತ. ಆದರೆ ಅದಕ್ಕೆ ಯಾವುದೇ ಸಾಕ್ಷಿಯಿಲ್ಲ ನಮ್ಮ ಮನಸಾಕ್ಷಿಯೇ ಸಾಕ್ಷಿ ಅಂತ. ಈ ಮನಸಾಕ್ಷಿ, , ವನಜಾಕ್ಷಿ, ಮೀನಾಕ್ಷಿಯನ್ನಿಟ್ಟುಕೊಂಡು ವ್ಯವಹಾರ ಮಾಡೋದನ್ನು ಗಾಂಧಿನಗರದವರು ಎಲ್ಲಿಂದ ಕಲಿತರು ಅಂತ? ನಮ್ಮ ಹಳ್ಳಿಗಳಲ್ಲಿ ಅಂಗಡಿಗೆ ಹೋಗಿ ಕಾಫಿಪುಡಿ ಸಾಲದ ರೂಪದಲ್ಲಿ ತಂದ್ರೂ ಅದನ್ನು ಒಂದು ಪುಸ್ತಕದಲ್ಲಿ ಬರೆದಿಟ್ಟುಕೊಳ್ಳುತ್ತಾನೆ ಆ ಅಂಗಡಿಯವನು. ಅಂತಹುದರಲ್ಲಿ ಕುಮಾರ್ ಅವ್ರು ಅಷ್ಟು ದೊಡ್ಡ ಮೊತ್ತವನ್ನು ಏನೂ ದಾಖಲೆಗಳಿಲ್ಲದೆ ಕೊಟ್ಟರೆಂದರೆ ಯಾರಾದ್ರೂ ನಂಬ್ತಾರೆ? ಯಾಕಾದ್ರೂ ನಂಬಬೇಕು? ಅಂದ್ರೆ ಅವರ ಬಳಿ ಅಷ್ಟೊಂದು ಹಣ ಇದೆಯಾ? ಮುಂದುವರಿದು ಅವ್ರು ಹೇಳ್ತಾರೆ.. ನನಗೆ ಹಣ ಬೇಡ ಆದ್ರೆ ಕಾಲ್ ಶೀಟ್ ಕೊಡಿ ಅಂತ. ಇತ್ತ ಕಡೆ ಆರೋಪ ಮಾಡುತ್ತಲೇ, ಅತ್ತ ಕಡೆ ಅವಕಾಶ ಕೇಳುತ್ತಿರುವ ಒಂದು ಕೆಟ್ಟ ವಿದ್ಯಮಾನವಾಗಿ ಕರ್ನಾಟಕ ಚಲನಚಿತ್ರ ಇತಿಹಾಸದಲ್ಲಿ ಇದು ದಾಖಲಾಗಿ ಉಳಿಯಲಿದೆ.
ನಾನು ಕುಮಾರ್ ಅವರಿಗಾಗಲಿ, ಇತರೆ ನಿರ್ಮಾಪಕರಿಗಾಗಲಿ ಹೇಳಲು ಬಯಸುವುದೇನೆಂದರೆ, ನಿಮಗೆ ಕಾಲ್ ಶೀಟ್ ಯಾಕೆ ಕೊಡಬೇಕು? ಸ್ನೇಹಿತರು ಅಂತಾನ? ನಿಮ್ಮೆಲ್ಲರ ಬಹುದೊಡ್ಡ ಸಮಸ್ಯೆ ಏನೆಂದರೆ,, ಸುದೀಪ್ ಏನೂ ಇಲ್ಲದೇ ಇದ್ದಾಗ ನಾವು ಜೊತೆಗಿದ್ವಿ, ಈಗ ಆತ ಎತ್ತರಕ್ಕೆ ಬೆಳೆದುಬಿಟ್ಟಿದ್ದಾರೆ. ಆದ್ದರಿಂದ ನಾವು ಕಷ್ಟಕ್ಕೆ ಸಿಕ್ಕಿಕೊಂಡಾಗಲೆಲ್ಲಾ ಸುದೀಪ್ ಸಹಾಯ ಹಸ್ತ ಚಾಚ್ತಾ ಇರ್ಬೇಕು? ಇದೆಂತಾ ನ್ಯಾಯ ಸ್ವಾಮಿ.. ಮೋದಿಯವರು ಕೂಡ ಟೀ ಮಾರುತ್ತಿದ್ರು ಹಾಗಂತ ಅವ್ರನ್ನು ಈಗಲೂ ಟೀ ಅಂಗಡಿಯಲ್ಲೇ ಕೂತಿರಿ ಅಂತ ಹೇಳೋಕಾಗುತ್ತಾ? ನಿಮ್ಮಂತಹ ಸ್ನೇಹಿತರನ್ನು ನಂಬಿಕೊಂಡು ಸುದೀಪ್ ಅವ್ರು ಮಾಡಿದ ಸಿನಿಮಾಗಳೆಷ್ಟು ಅಂತ ಒಂದ್ಸಲ ಲೆಕ್ಕಮಾಡಿ ನೋಡಿ… ಮತ್ತು ಅವುಗಳು ಬಿಡುಗಡೆ ಸಂದರ್ಭದಲ್ಲಿ ಎದುರಿಸಿದ ಕಷ್ಟಗಳು ಎಷ್ಟು ಎಂತಹವು ಗೊತ್ತಾ..? ರನ್ನ ಸಿನಿಮಾ ಬಿಡುಗಡೆ ಮುನ್ನಾ ದಿನ ಎಂಥಾ ಇಕ್ಕಟ್ಟಿಗೆ ಸಿಕ್ಕಿಕೊಂಡಿತು? ಕೋಟಿಗೊಬ್ಬ ೩ ಬಿಡುಗಡೆಯೇ ಆಗಲಿಲ್ಲ… ಇದಕ್ಕೆಲ್ಲಾ ಕಾರಣ ಯಾರು? ಅದೇ ಸ್ನೇಹಿತರಲ್ಲವೇ…
ಸುದೀಪ್ ಅವ್ರಿಗೆ ಸಿನಿಮಾ ಮಾಡಲು ಬರುವ ಬಹುತೇಕ ನಿರ್ಮಾಪಕರ ಹತ್ರ ಒಂದ್ರೂಪಾಯಿ ಹಣ ಕೂಡ ಇರಲ್ಲ. ಅದಕ್ಕಿಂತ ಪ್ರಮುಖ ಸಂಗತಿ ಏನೆಂದರೆ.. ಸಿನಿಮಾ ಮಾಡದಿದ್ದರೆ, ಇವರುಗಳ ಬ್ಯಾಂಕ್ ಬ್ಯಾಲೆನ್ಸ್ಗಳು ನಮ್ಮ ಬ್ಯಾಂಕ್ ಬ್ಯಾಲೆನ್ಸಗಳಷ್ಟೂ ಇರುವುದಿಲ್ಲ ಅದ್ರೂ ನಾವು ಇಂತಹ ಸಿನಿಮಾ ಮಾಡೋಕೆ ಅಗಲ್ಲ ಆದ್ರೆ ಇವ್ರು ಹೇಗೆ ಬಿಗ್ ಬಜೆಟ್ ಸಿನಿಮಾ ಮಾಡ್ತಾರೆ? ಸಿಂಪಲ್… ಸುದೀಪ್ ಅವ್ರಂತಹ ಸ್ಟಾರ್ಗಳ ಕಾಲ್ ಶೀಟ್ ಇವರಿಗೆ ಕೋಟ್ಯಾಂತರ ರೂಪಾಯಿಗಳ ಫಂಡಿಂಗ್ ಸಿಗುವಂತೆ ಮಾಡುತ್ತದೆ. ಸುದೀಪ್ ಸರ್ ಕಾಲ್ ಶೀಟ್ ಗ್ಯಾರಂಟಿ ಆದ್ಮೇಲೆ, ಇವರು ಫೈನಾನ್ಸಿಯರ್ಗಳ ಹತ್ರ ಹೋಗಿ ಇಪ್ಪತ್ತೋ ಮೂವತ್ತೋ ಕೋಟಿ ಹಣವನ್ನು ಬಡ್ಡಿಗೆ ತರ್ತಾರೆ. ಆ ಬಡ್ಡಿ ಬ್ಯಾಂಕ್ ಬಡ್ಡಿ ಅಲ್ಲ ಗಾಂಧಿನಗರದ ಬಡ್ಡಿ! ಆಟೋಮೀಟರ್ ಸ್ಪೀಡಲ್ಲಿ ಓಡ್ತಿರುತ್ತೆ. ಆ ಬಡ್ಡಿಗೆ ತಂದ ಹಣದಲ್ಲಿ ಇವ್ರು ಮೊದಲು ಇವರ ಸಾಲಗಳನ್ನು ತೀರಿಸಿಕೊಳ್ತಾರೆ. ಆಮೇಲೊಂದು ಮನೆ ಕಟ್ಟಿಸಿಕೊಳ್ತಾರೆ. ಮಕ್ಕಳ ವಿದ್ಯಾಭ್ಯಾಸಕ್ಕೆ ಬೇಕಾದ ಅನುಕೂಲ ಮಾಡಿಕೊಳ್ತಾರೆ. ಇವರ ಶೋಕಿ, ಬಾಕಿ ಎಲ್ಲವೂ ಅದರಿಂದಲೇ ತೀರುತ್ತೆ. ಕೊನೆಗೆ… ಅವರಿಗೆ ಸಿನಿಮಾ ನೆನಪಾಗುತ್ತೆ. ಆರು ತಿಂಗಳಲ್ಲಿ ಮುಗಿಯಬೇಕಾದ ಸಿನಿಮಾ, ಎರಡು ವರ್ಷವಾಗುತ್ತೆ. ಅಷ್ಟರಲ್ಲಿ… ಇತ್ತ ಗಾಂಧಿನಗರದ ಮೂವತ್ತು ಕೋಟಿಯು ಬಡ್ಡಿಸೇರಿ ಅರವತ್ತು ಕೋಟಿಯಾಗಿರುತ್ತೆ. ಬಿಡುಗಡೆ ಹೊತ್ತಿಗೆ ಸಾಲ ತೀರಿಸಬೇಕಿರುತ್ತೆ. ಆದರೆ ತೀರಿಸೋಕೆ ಇವರ ಹತ್ರ ಅಷ್ಟು ಹಣ ಇರಲ್ಲ. ಆಗ ಬಿಡುಗಡೆ ನಿಂತು ಹೋಗುತ್ತೆ. ಅಯ್ಯೋ ನಮ್ಗೆ ಲಾಸ್ ಆಯ್ತು.. ನಾವು ಕಷ್ಟದಲ್ಲಿದ್ದೇವೆ…ಈ ಸಿನಿಮಾ ಮಾಡಿ ನಾನು ಹಾಳದೆ, ಈ ಹೀರೋ ನಂಬಿ ನಾನು ಮನೆಮಠ ಕಳೆದುಕೊಂಡೆ ಅಂತ ಊರ್ ತುಂಬಾ ಹೇಳ್ಕೊಂಡು ಓಡಾಡ್ತಾರೆ. ಹೀರೋ ಮರ್ಯಾದೆ ತೆಗೀತಾರೆ. ಇತ್ತ ಅಭಿಮಾನಿಗಳು ಥಿಯೇಟರ್ ಮುಂದೆ ಕೂತು ಅವರ ಮೆಚ್ಚಿನ ನಟನ ಸಿನಿಮಾಗೆ ಈ ರೀತಿ ಆಗ್ತಿರೋದನ್ನು ನೆನೆದು ಅಳ್ತಿರ್ತಾರೆ. ದಯವಿಟ್ಟು ನಿರ್ಮಾಪಕರನ್ನು ಬದಲಾಯಿಸಿ ಅಣ್ಣ… ಅಂತ ಕೂಗ್ತಿರ್ತಾರೆ. ಅತ್ತ ನಿರ್ಮಾಪಕನ ಅಸಹಕಾರ, ಇತ್ತ ಅಭಿಮಾನಿಗಳ ಒತ್ತಡ… ಆಗ ಹೀರೋ ಮಧ್ಯಪ್ರವೇಶ ಮಾಡಬೇಕು. ಎಲ್ಲೆಲ್ಲಿಂದಲೂ ಹಣ ತಂದುಕೊಟ್ಟು ಸಿನಿಮಾ ಬಿಡುಗಡೆಗೊಳಿಸಬೇಕು. ರನ್ನ ಸಿನಿಮಾಗೆ ಆಗಿದ್ದು ಇದೆ. ಕೋಟಿಗೊಬ್ಬ ಸಿನಿಮಾಗೆ ಆಗಿದ್ದೂ ಇದೆ. ಎರಡೂ ಸಿನಿಮಾಗಳೂ ಬಿಡುಗಡೆ ಸಂಕಷ್ಟವನ್ನು ಎದುರಿಸಿದ್ದವು. ಇದಕ್ಕೆ ಕಾರಣವಾದವರು ಯಾರು? ಅದೇ ಸೋ ಕಾಲ್ಡ್ ಹಳೇ ಸ್ನೇಹಿತರು.
ಸೂರಪ್ಪ ಬಾಬು ಅಂತ ಒಬ್ಬರಿದ್ದಾರೆ. ಈ ಪ್ರಕರಣದಲ್ಲಿ ಅವ್ರು ಎಲ್ಲೂ ಕಾಣಿಸ್ತಿಲ್ಲ ಅಷ್ಟೇ, ಆದ್ರೆ ಇದರ ಹಿಂದೆ ನಿಂತು ನಡೆಸ್ತಿರೋರಲ್ಲಿ ಅವ್ರೂ ಒಬ್ರು. ಸೂರಪ್ಪ ಬಾಬು ಅವರು ನನಗೆ ಆತ್ಮೀಯರಾಗಿದ್ದವರು. ಅದೇ ಕಾರಣಕ್ಕೆ ಅವ್ರು ನಾನು ಅನೇಕ ವಿಷ್ಯಗಳ ಬಗ್ಗೆ ಅನೇಕ ವರ್ಷಗಳಿಂದ ಮಾತನಾಡ್ತಾ ಬಂದಿದ್ದೇವೆ. ಅವುಗಳ ಬಗ್ಗೆ ಈಗ ಹೇಳುವುದು ನನ್ನ ವ್ಯಕ್ತಿತ್ವ ಅಲ್ಲ. ಆದ್ರೆ ಅವರ ಮನಸಲ್ಲಿ ಒಳ್ಳೇತನವಿಲ್ಲ ಎಂಬುದು ಮಾತ್ರ ಸತ್ಯ. ಅವರಿಗೆ ವಿಷ್ಣು ಸರ್ ಬಗ್ಗೆಯೂ ಗೌರವವರಿಲಿಲ್ಲ, ಸುದೀಪ್ ಸರ್ ಬಗ್ಗೆಯೂ ಗೌರವವಿರಲಿಲ್ಲ. ನನ್ನ ಜೊತೆ ಮಾತನಾಡುವಾಗಲೆಲ್ಲಾ ಅವರಿಬ್ಬರನ್ನು ಏಕವಚನದಲ್ಲಿಯೇ ಸಂಭೋದಿಸಿದ್ದಾರೆ. ಕೇವಲ ವ್ಯವಹಾರಕ್ಕೆ ಮಾತ್ರ ಇವ್ರು ಅವರಿಬ್ಬರ ಜೊತೆ ಚೆನ್ನಾಗಿದ್ದರು ಅಷ್ಟೇ. ಇದೇ ಸೂರಪ್ಪಬಾಬು ಅವ್ರು… ಬಸವೇಶ್ವರ ನಗರದ ಹೋಟೆಲ್ ಒಂದರಲ್ಲಿ ಅನ್ನದ ಎದುರು ಕೂತು ಹೇಳಿದ್ದ ಮಾತು “ಕೋಟಿಗೊಬ್ಬ ೨ರಲ್ಲಿ ನನ್ನಿಂದ ಸುದೀಪ್ ಅವ್ರಿಗೆ ಸ್ವಲ್ಪ ಬೇಸರವಾಗಿದೆ. ನನ್ನ ಸ್ವಯಂಕೃತ ಅಪರಾಧಗಳಿಂದಾಗಿ ಸಿನಿಮಾ ಹಿಟ್ ಆದ್ರೂ ನನಗೆ ಲಾಭವಾಗಲಿಲ್ಲ. ಹೇಗೋ… ನನಗೆ ಇಬ್ಬರು ಹೆಣ್ಮಕ್ಕಳ್ಳಿರುವ ವಿಷ್ಯ ಸುದೀಪ್ ಅವ್ರಿಗೆ ಗೊತ್ತಾದ ಮೇಲೆ ಅವರೇ ಕರೆದು ಕೋಟಿಗೊಬ್ಬ ೩ ಸಿನಿಮಾ ಮಾಡೋಕೆ ಅವಕಾಶ ಕೊಟ್ರು ಅಂತ ಹೇಳಿದ್ದರು. ಆದ್ರೆ ಅದೇ ಸೂರಪ್ಪಬಾಬು ಇವತ್ತು ಈ ಷಡ್ಯಂತ್ರದ ಭಾಗವಾಗಿದ್ದಾರೆ. ಸುದೀಪ್ ಅವ್ರ ತೇಜೋವಧೆಗೆ ಇಳಿದಿದ್ದಾರೆ. ಅನೇಕ ಪತ್ರಕರ್ತರಿಗೆ ಕರೆಮಾಡಿ, ನಾಳೆ ಸುದೀಪ್ ವಿರುದ್ದ ಪ್ರೆಸ್ಮೀಟ್ ಇದೆ, ನಿಮ್ಮ ಫುಲ್ ಸಪೋರ್ಟ್ ಬೇಕು ಅಂತ ಕೇಳಿದ್ದಾರೆ. ತಪ್ಪಲ್ವಾ.. ಸೂರಪ್ಪ ಬಾಬು ಅವರೇ… ನಿಮ್ಮ ಕಷ್ಟಕ್ಕೆ ಅಂತ ಜೊತೆಯಾದ ವ್ಯಕ್ತಿ ಬಗ್ಗೆ ಹೀಗೆಲ್ಲಾ ಮಾಡುವುದು ತಪ್ಪಲ್ವಾ..? ಇವತ್ತು ಸುದೀಪ್ ಅವ್ರು ಮತ್ತೆ ಕಾಲ್ಶೀಟ್ ಕೊಡ್ತಿಲ್ಲ ಅಂತ ನೀವು ಆರೋಪ ಮಾಡಲು ಪ್ರೆಸ್ಮೀಟ್ ಮಾಡಿಸ್ತೀದ್ದೀರಲ್ವಾ! ನಿಮ್ಮ ಕೋಟಿಗೊಬ್ಬ ೩ ಸಿನಿಮಾ ಬಿಡುಗಡೆ ನಿಂತು ಹೋದ ದಿನ, ನಾನು ಜಾಕ್ ಮಂಜು ಅವರ ಮೂಲಕ ಹಣ ಕಳುಹಿಸಿಕೊಟ್ಟೆ ಅದನ್ನು ನೀವು ಎರಡೂವರೆ ವರ್ಷಗಳ ಕಾಲ ಕಾಡಿಸಿ, ಆಡಿಸಿ, ನೋಯಿಸಿ ವಾಪಸ್ಸು ಮಾಡಿದ್ರಿ. ಇನ್ನೂ ಸ್ವಲ್ಪ ಹಣ ಬಂದೇ ಇಲ್ಲ! ಅದರ ಬಗ್ಗೆ ನಾನೂ ಪ್ರೆಸ್ಮೀಟ್ ಮಾಡ್ಲಾ? ನಿಮ್ಜೊತೆಗಿನ ಸ್ಕ್ರೀನ್ ಶಾಟ್ ಗಳನ್ನು ಶೇರ್ ಮಾಡ್ಲಾ? ನೀವು ಜೊತೆಗಿದ್ದವರಿಗೆ ಹೀಗೆ ಬೆನ್ನಿಗೆ ಚೂರಿ ಹಾಕುವುದಾದರೆ, ನಾನೂ ಹಾಕಬಹುದಿತ್ತಲ್ಲವಾ? ಆದ್ರೆ ನಾನು ಆ ಕೆಲಸ ಮಾಡಲಿಲ್ಲ ಏಕೆಂದರೆ ನನ್ನ ಯಜಮಾನ್ರು ಆ ಸಂಸ್ಕಾರ ನನಗೆ ಕಲಿಸಿಲ್ಲ. ಬಟ್ ಯಜಮಾನ್ರ ಗರಡಿಯಲ್ಲಿ ಪಳಗಿದ ನಿಮಗ್ಯಾಕೆ ಆ ಸಂಸ್ಕಾರ ಬರಲಿಲ್ಲ?ಇನ್ನು ರೆಹಮಾನ್ ಅವ್ರು “ಯಜಮಾನ ಎಂಬ ಮಹೋನ್ನತ ಸಿನಿಮಾದ ನಿರ್ಮಾಪಕರು”. ನೆನಪಿರಬಹುದು ನಾವು ಕಟೌಟ್ ಜಾತ್ರೆ ಮಾಡಿದ್ವಿ. ಅದು ಈಗ ಏಷಿಯನ್ ಬುಕ್ ಆಫ್ ರೆಕಾರ್ಡ್ನಲ್ಲಿ ದಾಖಲಾಗಿದೆ. ಆ ಕಟೌಟ್ ಜಾತ್ರೆಗೆ ಅಭಿಮಾನಿಗಳೆಲ್ಲರೂ ಒಂದೊಂದು ಕಟೌಟ್ ಮಾಡಿಸುತ್ತಿದ್ದೇವೆ, ನೀವೂ ಒಂದು ಕಟೌಟ್ ಕೊಡಿ ಸರ್ ಅಂತ ಕೇಳಿದ್ದಕ್ಕೆ ಅಯ್ಯೋ… ನಿಮ್ಮೆಜಮಾನ್ರಿಂದ ನಾನೇನು ಉದ್ದಾರವಾಗಿಲ್ಲ, ಕಟೌಟ್ ಕೊಡೋಕೆ ಆಗಲ್ಲ ಅಂತ ಹೇಳಿದ ದೊಡ್ಡವ್ಯಕ್ತಿ ಅವರು. ಯಜಮಾನ ಸಿನಿಮಾವನ್ನು ಮರುಬಿಡುಗಡೆ ಮಾಡೋಣವಾ ಸರ್ ಅಂದ್ರೆ ನನ್ನ ಹತ್ರ ಇಪ್ಪತ್ತೈದು ಲಕ್ಷ ಕೇಳಿದ ನಿರ್ಮಾಪಕರು ಅವ್ರು. ಅಂತಹ ರೆಹಮಾನ್ ಅವ್ರು ಇವತ್ತು ಯಜಮಾನ್ರ ಕೆಲಸಗಳಿಗಾಗಿ ೩೬೫ ದಿನವೂ ಸಿದ್ದವಾಗಿರೋ ಸುದೀಪ್ ಅವ್ರ ಬಗ್ಗೆ ಮಾತನಾಡ್ತೀದ್ದಾರೆ. ಅದೂ ವಿಷ್ಣು ಸರ್ ಹೆಸರನ್ನು ತೆಗೆದುಕೊಂಡು. ಮುಜುಗರವಾಗಲ್ವಾ ಇವರಿಗೆ? ಸ್ವರ್ಗ್ ಸಿನಿಮಾಗೆ ವಿಷ್ಣು ಸರ್ ಅವ್ರನ್ನು ಒಪ್ಪಿಸ್ತೀನಿ ಅಂತ ಹೇಳಿ ನೀವು ಸುದೀಪ್ ಅವ್ರ ಕಾಲ್ ಶೀಟ್ ಅನ್ನು ಪಡೆದಿದ್ದರ ಬಗ್ಗೆ ನೀವೇ ನನಗೆ ಹೇಳಿದ್ರಿ. ಆಮೇಲೆ ವಿಷ್ಣು ಸರ್ ಆ ಸಿನಿಮಾ ಒಪ್ಪಲಿಲ್ಲ ಎಂಬ ಕಾರಣಕ್ಕೆ ಸುದೀಪ್ ಸರ್ ಕೂಡ ಅದರಲ್ಲಿ ನಟಿಸಲಿಲ್ಲ. ಏಕೆಂದರೆ ವಿಷ್ಣು ಅವರಿಲ್ಲದ ಮೇಲೆ ಆ ಸಿನಿಮಾಗೆ ಧಮ್ ಇಲ್ಲ ಅಂತ ಅವ್ರು ನಂಬಿದ್ದರು. ಆ ಮೂಲಕ ಅವ್ರು ಯಜಮಾನ್ರಿಗೆ ಗೌರವ ಕೊಟ್ಟಿದ್ದರು. ಆ ವಿಷ್ಯವನ್ನು ಈಗ ಅವಕಾಶ ಸಿಕ್ಕಿದೆ ಅಂತ ನೀವು ತಿರುಗಾ ಮುರುಗಾ ಮಾಡಿ ಮಾತಾಡುವುದು ತಪ್ಪಲ್ವಾ ಸರ್? ʼದೊಡ್ಮನುಷ್ಯʼ ಟೈಟಲ್ ಸುದೀಪ್ ಅವ್ರಿಗಾಗಿ ನೋಂದಾಯಿಸಿ ಇಟ್ಟುಕೊಂಡಿದ್ದೇನೆ. ನೀವೊಂದು ಮಾತು ಸುದೀಪ್ ಅವ್ರಿಗೆ ಹೇಳಿ ಅಂತ ನನ್ನ ಮೂಲಕ ಶಿಫಾರಸ್ಸಿಗೆ ಯತ್ನಿಸಿದ್ದು ಮರೆತಿದ್ದೀರಾ? ನಿಮ್ಗೆ ಸುದೀಪ್ ಅವ್ರಿಂದ ಮೋಸವಾಗಿದ್ದರೆ ಸುದೀಪ್ ಅವ್ರಿಗಾಗಿ ಆ ಟೈಟಲ್ ಯಾಕೆ ರಿಜಿಸ್ಟರ್ ಮಾಡಿದ್ರಿ? ಅಂದ್ರೆ ನಿಮಗೆ ಅವರ ಬಗ್ಗೆ ಗೌರವವಿತ್ತು ಆದ್ರೆ ಅದು ಅವಕಾಶ ಸಿಗಬಹುದೆನ್ನುವ ಗೌರವ. ಯಾವಾಗ ಅದು ಸಿಗುವುದಿಲ್ಲವೆಂಬುದು ಖಾತ್ರಿಯಾಯಿತೋ… ಆಗ ಎಟುಕದ ದ್ರಾಕ್ಷಿ ಹುಳಿಯಾಗಿಬಿಟ್ಟಿದೆ ಅಷ್ಟೇ. ಇನ್ಮೇಲೆ ಅವ್ರ ಸಿನಿಮಾ ಮಾಡೋಕೆ ಅಗಲ್ಲ ಅನ್ನೋ ಸತ್ಯವನ್ನು ಅರಗಿಸಿಕೊಳ್ಳಲಾಗದೆ, ಅಸಹಾಯಕತೆ ಮತ್ತು ಅಸಹನೆಯನ್ನು ಹೀಗೆ ಹೊರಹಾಕಿ, ಯಜಮಾನ ಸಿನಿಮಾದ ನಿರ್ಮಾಪಕನೆಂಬ ಘನತೆಯನ್ನು ಕಳೆದುಕೊಳ್ಳುತ್ತಿದ್ದೀರಿ.
ಯಾರಾದ್ರೂ ಕಷ್ಟದಲ್ಲಿದ್ದಾರೆ ಅಂದ್ರೆ ಕೈ ಹಿಡಿಯೋ ಇವತ್ತಿನ ತಲೆಮಾರಿನ ಬಹುದೊಡ್ಡ ನಟ ಸುದೀಪ್ ಅವರು. ಶೋ ರೂಮಿನಿಂದ ಗಾಡಿ ಖರೀದಿಸಿ, ರೋಡಿಗೆ ಇಳಿದ ತಕ್ಷಣ ಆಕ್ಸಿಡೆಂಟ್ ಆದ್ರೆ, ಯಾವ ಶೋರೋಮಿನವನೂ ಹಣ ವಾಪಸ್ಸು ಕೊಡುವುದಿಲ್ಲ. ಅಂತಹುದರಲ್ಲಿ ಸುದೀಪ್ ಸರ್ ಒಂದು ಸಿನಿಮಾ ನಷ್ಟವಾಯ್ತು ಅಂದ ತಕ್ಷಣ ಕರೆದು ಮತ್ತೊಂದು ಸಿನಿಮಾ ಕೊಡುವಷ್ಟು ಸಂಭಾವಿತರು. ರಾಜ್, ವಿಷ್ಣು ನಂತರದಲ್ಲಿ ಅಂತಹದೊಂದು ಪರಂಪರೆಯನ್ನು ಇಂದಿಗೂ ಮುಂದುವರಿಸಿಕೊಂಡು ಹೋಗುತ್ತಿರುವವರಲ್ಲಿ ಸುದೀಪ್ ಅವ್ರು ಮೊದಲಿಗರು. ಆದ್ದರಿಂದಲೇ ಕುಮಾರ್ ಅವ್ರು ನಾಲ್ಕು ಸಿನಿಮಾ ಮಾಡಲು ಸಾಧ್ಯವಾಯಿತು. ಸೂರಪ್ಪ ಬಾಬು ಅವ್ರು ಎರಡು ಸಿನಿಮಾ ಮಾಡಲು ಸಾಧ್ಯವಾಯಿತು. ರೆಹಮಾನ್ ಅವ್ರು ಇಷ್ಟೆಲ್ಲಾ ಮಾತನಾಡುವಂತಾಯಿತು…
ಸುದೀಪ್ ಅವ್ರ ಮಾನಹರಣ ಮಾಡಿದ್ರೆ ಇವರಿಗೆ ಅವ್ರ ಕಾಲ್ ಶೀಟ್ ಸಿಗಲ್ಲ ಅನ್ನೋದು ಗೊತ್ತು… ಆಗಿದ್ರೂ ಯಾಕೆ ಈ ಕೆಲಸ ಮಾಡ್ತಿದ್ದಾರೆ? ಯಾಕೆ ಅಂದ್ರೆ ನೀವು ಹೀಗೆ ಅವರ ತೇಜೋವಧೆ ಮಾಡುವದರಿಂದ ಇವರು ಕೆಲವು ಹೀರೋಗಳಿಗೆ ಹತ್ತಿರವಾಗುತ್ತಾರೆ. ಅವರ ಕಾಲ್ ಶೀಟ್ ಅದ್ರೂ ಸಿಗಬಹುದು ಎಂಬ ದೂರದೃಷ್ಟಿ ಅವರದು. ಆದ್ರೆ ಒಂದು ನೆನಪಿರಲಿ.. ಸುದೀಪ್ ಅವ್ರ ಮಾನಹರಣ ಮಾಡೋಕೆ ಅವರಿಗಿಂತ ಒಂದಷ್ಟು ಎತ್ತರದ ವ್ಯಕ್ತಿ ಇರಬೇಕು. ಅವರಿಗಿಂತ ಚೂರು ಹೆಚ್ಚೇ ಸಾಧನೆ ಮಾಡಿರಬೇಕು. ಇಲ್ಲವಾದರೆ ಕನ್ನಡ ಜನತೆ ಅದನ್ನು ನಂಬಲ್ಲ. ಚಿನ್ನದ ಶುದ್ದತೆಯನ್ನು ಪರೀಕ್ಷಿಸುವ ಹಾಗೆ, ನಿಮ್ಮ ಆರೋಪಗಳನ್ನೂ ಪರೀಕ್ಷಿಸುತ್ತಾರೆ. ಆಗ ಬಟಾಬಯಲಾಗೋ ಸರದಿಯಲ್ಲಿ ನೀವೂ ಇರ್ತೀರಿ.ಇನ್ನು ಆ ವಾಣಿಜ್ಯ ಮಂಡಳಿ! ದೇವ್ರೇ… ಅದರ ಬಗ್ಗೆ ಮಾತನಾಡೋದೆ ಬೇಡ. ಒಬ್ಬ ತಾಯಿಗೆ ಹತ್ತು ಮಕ್ಕಳಿದ್ದರೆ ಹತ್ತೂ ಮಕ್ಕಳಿಗೂ ಸಮಾನ ಪ್ರೀತಿ ಹಂಚ್ತಾಳೆ… ಅದಕ್ಕೆ ಆಕೆ ತಾಯಿ! ಆದ್ರೆ ಚಿತ್ರರಂಗದ ಮಾತೃಸಂಸ್ಥೆ ಎಂದು ಕರೆಸಿಕೊಳ್ಳುವ ಇವ್ರು ಮಾತ್ರ, ಇಡೀ ದೇಶವೇ ಹೆಮ್ಮೆಪಡುವಂತಹ ಕನ್ನಡದ ಸೂಪರ್ ಸ್ಟಾರ್ ವಿರುದ್ದ ಷಡ್ಯಂತ್ರ ನಡೆಸೋಕೆ ವಾಣಿಜ್ಯ ಮಂಡಳಿಯಲ್ಲಿಯೇ ಪ್ರೆಸ್ಮೀಟ್ ಆಯೋಜನೆಗೆ ಅವಕಾಶ ಕೊಡ್ತಾರಂದ್ರೆ ಏನ್ ಹೇಳಬೇಕು. ಅಂದರೆ ಇವರ ಪಕ್ಷಪಾತ ಧೋರಣೆಗಳ ಅಧ್ಯಾಯ ಇನ್ನೂ ಮುಗಿದಿಲ್ಲವೆನಿಸುತ್ತೆ. ಅಮೃತಮಹೋತ್ಸವದಲ್ಲಿ ಪೋಷಕ ನಟರ ಸಾಲಿನಲ್ಲಿ ಕೂರಿಸಿ ಡಾ.ವಿಷ್ಣುವರ್ಧನ್ ಅವರಿಗೆ ಸನ್ಮಾನಿಸಿ ಅವಮಾನಿಸಿದ ಈ ತಂಡ ಇಷ್ಟು ವರ್ಷಗಳ ನಂತರವಾದರೂ ಬದಲಾಗದೇ ಹೋಗಿರುವುದು ಏಕೆ ಅಂತ? ಭಾಮಾ ಹರೀಶ್ ಅವರಂತಹ ವ್ಯಕ್ತಿ ಬಂದ್ಮೇಲೂ ಇಂತಹ ಪಕ್ಷಪಾತಿ ಚಟುವಟಿಕೆಗಳು ಆಗುತ್ತಿವೆ ಎಂದರೆ ಏನ್ ಹೇಳುವುದು? ಕನ್ನಡ ಸಿನಿಮಾ ರಂಗದಲ್ಲಿ ವರ್ಷಕ್ಕೆ ಐದು ಸಿನಿಮಾ ಕೂಡ ಹಿಟ್ ಆಗ್ತಿಲ್ಲ. ಥಿಯೇಟರ್ಗಳು ಮುಚ್ಚಿಕೊಂಡು ಹೋಗ್ತಿವೆ. ಇದನ್ನೇ ನಂಬಿದ ಜನ ಮಕ್ಕಳಿಗೆ ಸ್ಕೂಲ್ ಫೀಸ್ ಕಟ್ಟಲಾಗದ, ಮನೆ ಬಾಡಿಗೆ ಕಟ್ಟಲಾಗದ ದುಸ್ಥಿತಿಯಲ್ಲಿದ್ದಾರೆ. ಇಂತಹ ಸಂದರ್ಭದಲ್ಲಿ ಚಿತ್ರರಂಗದ ಏಳ್ಗೆಗೆ ಮಾರ್ಗೋಪಾಯಗಳನ್ನು ಹುಡುಕುವ ಕೆಲಸ ಮಾಡಬೇಕಲ್ಲವಾ? ಸುದೀಪ್ ಅವ್ರ ಆದಿಯಾಗಿ, ಎರಡು ವರ್ಷಕ್ಕೆ ಒಂದು ಸಿನಿಮಾ ಮಾಡೋ ಸ್ಟಾರ್ಗಳಿಗೆ ವರ್ಷಕ್ಕೆ ಎರಡು ಸಿನಿಮಾ ಮಾಡುವಂತೆ ತಾಕೀತು ಮಾಡಬೇಕಲ್ಲವಾ? ಅದನ್ನೆಲ್ಲಾ ಬಿಟ್ಟು ಇಂತಹ ಷಡ್ಯಂತ್ರಗಳ ಭಾಗವಾಗುತ್ತಿರುವುದು ನಿಜಕ್ಕೂ ನಾಚಿಕೆಗೇಡು.
ಸುದೀಪ್ ಸರ್ ಅವ್ರು ಹತ್ತು ವರ್ಷಗಳ ಹಿಂದೆ ಇದ್ದ ರೀತಿ ಇಂದು ಇದ್ದಿದ್ದರೆ ಇವರುಗಳು ಹೀಗೆಲ್ಲಾ ಮಾತನಾಡಲು ಸಾಧ್ಯವೇ ಆಗುತ್ತಿರಲಿಲ್ಲ. ಆದ್ರೆ ಅವ್ರು ಈಗ ಬದಲಾಗಿದ್ದಾರೆ. ನಡೆ ನುಡಿಯಲ್ಲಿ ಸಂಯಮ, ಸಂಸ್ಕಾರ, ಹಿರಿಯರ ಬಗ್ಗೆ ಗೌರವ, ಕಿರಿಯರಿಗೆ ಪ್ರೋತ್ಸಾಹ ಕೊಡ್ತಾ ಸಮಸ್ತ ಚಿತ್ರರಂಗ ನನ್ನ ಕುಟುಂಬ ಎಂಬ ಭಾವಬಿತ್ತಿ ಬೆಳೆಯುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಇವರೆಲ್ಲರೂ ಅವರ ಸಂಯಮವನ್ನು ಅಣಕಿಸುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕಬೇಕಿರುವುದು ಬೆಂಗಳೂರಿನ ಅಭಿಮಾನಿಗಳು ಮಾತ್ರವಲ್ಲ ರಾಜ್ಯದಲ್ಲಿರುವ ಸುದೀಪ್ ಅವ್ರ ಅಭಿಮಾನಿಗಳೆಲ್ಲರೂ ಈ ನಿರ್ಮಾಪಕರ ಮನೆಗಳ ಎದುರು ಧರಣಿ ಕೂತು, ದಾಖಲೆ ಕೇಳಬೇಕು. ದಾಖಲೆ ಕೊಡಲಾಗದಿದ್ದರೆ ಕ್ಷಮೆ ಕೇಳುವಂತೆ ಮಾಡಬೇಕು.ಒಬ್ಬರ ಒಳ್ಳೇತನ ಸಮಯಸಾಧಕರಿಗೆ ಅಸ್ತ್ರವಾಗಬಾರದು. ಅಷ್ಟೇ…ನಿಮ್ಮ ವೀರಕಪುತ್ರ ಶ್ರೀನಿವಾಸಎಂದು ಫೇಸ್ ಬುಕ್ ನಲ್ಲಿ ಹಂಚಿಕೊಂಡಿದ್ದಾರೆ.